ತುಂಗ ಪೂಜಾರಿ ಜಮೀನಿನಲ್ಲಿದ್ದ ಶಿಲೆ ಅಯೋಧ್ಯೆಗೆ

ಮಂಗಳೂರು: ಅಯೋಧ್ಯೆ ರಾಮ ಜನ್ಮ ಭೂಮಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗಾಗಿ ಬೇಕಾದ  ಶಿಲೆಯನ್ನುಕರ್ನಾಟಕದ ಕಾರ್ಕಳದಿಂದ ಆಯ್ಕೆ ಮಾಡಲಾಗಿದೆ. ಈ ಮೂಲಕ ಕಾರ್ಕಳದ ಶಿಲೆ ಬಾಲ ರಾಮನ ರೂಪ ಪಡೆಯಲಿದೆ. ಉಡುಪಿಯ ಕಾರ್ಕಳ ತಾಲೂಕಿನ ನೆಲ್ಲಿಕಾರಿನ ಕೃಷ್ಣಶಿಲೆ ಅಯೋಧ್ಯೆಗೆ ಪ್ರಯಾಣ ಬೆಳೆಸಿದೆ. ಮಾ.16 ರಾತ್ರಿ ಕೃಷ್ಣಶಿಲೆಗೆ ವಿಶೇಷ ಪೂಜೆ ಸಲ್ಲಿಸಿ ಅಯೋಧ್ಯೆಗೆ ರವಾನಿಸಲಾಗಿದೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಶಿಲ್ಪಿ ಕುಶ್‌ದೀಪ್ ಬನ್ಸಾಲ್ ನೇತೃತ್ವದಲ್ಲಿ ಪರಿಣಿತ ತಜ್ಞರ ತಂಡವೊಂದು ನೆಲ್ಲಿಕಾರಿಗೆ ತಿಂಗಳ ಹಿಂದೆ ಆಗಮಿಸಿ, ಇಲ್ಲಿನ ಶಿಲೆಗಳ ಪರಿಶೀಲನೆ ನಡೆಸಿ ಈದು ಗ್ರಾಮದ ತುಂಗ ಪೂಜಾರಿಯವರ ಜಮೀನಿನಲ್ಲಿದ್ದ ಶಿಲೆಯನ್ನು ಬಾಲರಾಮನ ವಿಗ್ರಹಕ್ಕಾಗಿ ಗುರುತಿಸಿತ್ತು. ಬಜಗೋಳಿ ಅಯ್ಯಪ್ಪ ಮಂದಿರದಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ‘ಜರಂಗದಳದ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ  9 ಟನ್ ತೂಕ, 9.5 ಅಡಿ ಉದ್ದ, 6 ಅಡಿ ಅಗಲ ಮತ್ತು 4.5 ಅಡಿ ದಪ್ಪವಿರುವ ಶಿಲೆಯನ್ನು ಕಾರ್ಕಳದಿಂದ ಸುಮಾರು 2120 ಕಿ.ಮೀ. ದೂರದ ಅಯೋಧ್ಯೆಗೆ ಟ್ರಕ್ ಮೂಲಕ ಕಳುಹಿಸಲಾಯಿತು.

ಈಗಾಗಲೇ ಮೈಸೂರು ಜಿಲ್ಲೆಯ ಹೆಗ್ಗಡೆದೇವನ ಕೋಟೆಯಿಂದ ಎರಡು ಶಿಲೆಗಳನ್ನು ಅಯೋಧ್ಯೆ ತಲುಪಿದ್ದು,  ನೇಪಾಳದ ಗಂಡಕೀ ನದಿಯಿಂದ ತೆಗೆದ ಎರಡು ಸಾಲಿಗ್ರಾಮ ಶಿಲೆಗಳು ಅಯೋಧ್ಯೆಗೆ ತರಲಾಗಿದೆ.ಇದರೊಂದಿಗೆ  ರಾಜಸ್ಥಾನದಿಂದ ಮೂರು ಅಮೃತಶಿಲೆಗಳು ಈಗಾಗಲೇ ಅಯೋಧ್ಯೆ ತಲುಪಿದೆ. ಒಡಿಶಾ ಮತ್ತು ತಮಿಳುನಾಡಿನಿಂದ ಶಿಲೆಗಳು ಅಯೋಧ್ಯೆಗೆ ಬರಲಿದ್ದು, ಎಲ್ಲಾ ಶಿಲೆಗಳು ಇಲ್ಲಿಗೆ ತಲುಪಿದ ಬಳಿಕ ಪರಿಣಿತ ಶಿಲ್ಪಿಗಳು ಹಾಗೂ ತಜ್ಞರ ಸಮಿತಿ ಪರೀಕ್ಷೆ ನಡೆಸಿ ರಾಮಲಲ್ಲನ ವಿಗ್ರಹಕ್ಕಾಗಿ ಶಿಲೆಯ ಆಯ್ಕೆ ಮಾಡಲಿದೆ.

LEAVE A REPLY

Please enter your comment!
Please enter your name here