ಮಂಗಳೂರು – ಪೌರ ಕಾರ್ಮಿಕರ ಮುಷ್ಕರ – ಗಬ್ಬು ನಾರುತ್ತಿರುವ ಸ್ಮಾರ್ಟ್‌ ಸಿಟಿ

ಮಂಗಳೂರು: ಪೌರ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನಡೆಸುತ್ತಿರುವ ಮುಷ್ಕರದಿಂದಾಗಿ ಮಂಗಳೂರು ನಗರದಲ್ಲಿ ಗಬ್ಬುವಾಸನೆ ಬರುತ್ತಿದೆ. ಮುಷ್ಕರ ಆರಂಭಗೊಂಡು 10 ದಿನಗಳಾಗಿದ್ದು ಮಂಗಳೂರು ನಗರದ ವಿವಿದೆಡೆ ಕಸದ ರಾಶಿ ಬೆಟ್ಟದೆತ್ತರಕ್ಕೆ ತಲುಪಿದೆ. ಮಾತ್ರವಲ್ಲ ಅಂಗಡಿ ಮುಂಗಟ್ಟುಗಳ ಎದುರು ತ್ಯಾಜ್ಯದ ರಾಶಿ ಕಂಡುಬರುತ್ತಿದ್ದು, ನಗರದ ಜನತೆ ಪಾಲಿಕೆಗೆ ಮತ್ತು ರಾಜ್ಯ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಅಪಾರ್ಟ್ ಮೆಂಟ್, ಹೋಟೆಲ್, ಮನೆಗಳ ಮುಂದೆ ಹಾಕಿದ್ದ ಕಸ ತೆಗೆಯದ ಹಿನ್ನೆಲೆಯಲ್ಲಿ ನಿವಾಸಿಗಳು ಮೂಗು ಮುಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.


ಮಂಗಳೂರು ಮಹಾನಗರ ಪಾಲಿಕೆಯು ಆಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲ್ ಪ್ರೈವೇಟ್ ಲಿಮಿಟೆಡ್ ನೊಂದಿಗೆ ಒಪ್ಪಂದ ಮಾಡಿಕೊಂಡು ಮಂಗಳೂರಿನಲ್ಲಿ ತ್ಯಾಜ್ಯ ಸಂಗ್ರಹಿಸುವ ಪರ್ಯಾಯ ವ್ಯವಸ್ಥೆ ಮಾಡಿದೆಯಾದರೂ ಎಲ್ಲಾ 60 ವಾರ್ಡ್’ಗಳಿಂದ ತ್ಯಾಜ್ಯ ನಿರ್ವಹಣೆ ಕಷ್ಟದಾಯಕಾಗಿದೆ. ಇದರಿಂದಾಗಿ ಕೆಲ ವಾರ್ಡ್ ಗಳಲ್ಲಿ ತ್ಯಾಜ್ಯದ ವ್ಯಾಜ್ಯ ವಿಕೋಪಕ್ಕೆ ತಲುಪಿದೆ. ನಗರದಲ್ಲಿನ ಕಸದ ರಾಶಿಯನ್ನು ತೆರವುಗೊಳಿಸಲು ಪಾಲಿಕೆಯು ಪ್ರಯತ್ನ ಮಾಡುತ್ತಿದೆ ಎಂದು ಮೇಯರ್ ಹೇಳಿಕೆ ನೀಡಿದ್ದರೂ, ನಗರಾದ್ಯಂತ ಕಸದ ಸಮಸ್ಯೆ ಮಿತಿ ಮೀರಿದ್ದು, ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಮುಂದುವರಿದರೆ ನಗರದ ಖ್ಯಾತಿಗೆ ಧಕ್ಕೆ ಬರಲಿದೆ ಎಂದು ಕೈಗಾರಿಕೋದ್ಯಮಿಗಳು, ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಪೌರ ಕಾರ್ಮಿಕರ ಸಮಸ್ಯೆಗೆ ಪರಿಹಾರ ಕಲ್ಪಿಸುವಲ್ಲಿ, ತ್ಯಾಜ್ಯ ವಿಲೇವಾರಿಗೆ  ವ್ಯವಸ್ಥೆ ಕಲ್ಪಿಸುವಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮಾ.21ರ ಮಂಗಳವಾರ ಪ್ರತಿಭಟನೆ ನಡೆಸಿದೆ.

ಮಹಾನಗರ ಪಾಲಿಕೆ ಕಚೇರಿಯ ಎದುರು ಮಂಗಳೂರು ನಗರ, ಮಂಗಳೂರು ದಕ್ಷಿಣ ಮತ್ತು ಮಂಗಳೂರು ಉತ್ತರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಮನಪಾ ವಿಪಕ್ಷ ನಾಯಕ ನವೀನ್ ಡಿಸೋಜ, ಎ.ಸಿ.ವಿನಯರಾಜ್, ಪ್ರಕಾಶ್ ಸಾಲ್ಯಾನ್, ಅಬ್ದುಲ್ ರವೂಫ್, ಮಂಜುಳಾ ನಾಯಕ್, ಶಶಿಧರ ಹೆಗ್ಡೆ, ಮುಹಮ್ಮದ್ ಕುಂಜತ್ತಬೈಲ್, ಡಿಕೆ ಅಶೋಕ್‌ ಕುಮಾರ್‌‌, ಶಾಲೆಟ್ ಪಿಂಟೋ ಮತ್ತಿತರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here