ಟೋಲ್‌ ದರ ಹೆಚ್ಚಳ – ಪ್ರತಿಭಟನೆಗೆ ಹೋರಾಟ ಸಮಿತಿ ಮನವಿ

ಮಂಗಳೂರ: ಎಪ್ರಿಲ್ ಒಂದರಿಂದ ಅನ್ವಯವಾಗುವಂತೆ  ದೇಶಾದ್ಯಂತ ಟೋಲ್ ದರಗಳನ್ನು 5ರಿಂದ 10 ಶೇ.ದ ವರಗೆ ಏರಿಸಲು ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಇದು ಏಕಪಕ್ಷೀಯ ಅನೈತಿಕ ನಿರ್ಧಾರವಾಗಿದ್ದು ವಾಹನ ಸವಾರರ ಮೇಲೆ ದೊಡ್ಡ ಹೊರೆಬೀಳಲಿದೆ. ಕೇಂದ್ರ ಸರಕಾರದ ಈ ನಿರ್ಧಯ ಸುಲಿಗೆ ನೀತಿಯನ್ನು ವಿರೋಧಿಸಿ ಎ.1ರಂದು ರಾಜ್ಯಾದ್ಯಂತ ಟೋಲ್ ಗೇಟ್ ಗಳ ಮುಂಭಾಗ ಜನಪರ ಸಂಘಟನೆಗಳು ಪ್ರತಿಭಟನೆ ನಡೆಸುವಂತೆ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಮನವಿ ಮಾಡಿದೆ.

ಈಗಾಗಲೆ ಬೆಲೆಯೇರಿಕೆ, ನಿರುದ್ಯೋಗ, ಆದಾಯ ಕುಸಿತದಿಂದ ಜನತೆ ಕಂಗೆಟ್ಟಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಸಾರ್ವಕಾಲಿಕ ಕುಸಿತ ಕಂಡಿದ್ದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ವಿಪರೀತ ಹೆಚ್ಚಿದೆ. ಇದರಿಂದ ಸರಕು ಸಾಗಣೆ ದುಬಾರಿಯಾಗಿ ಜನತೆಯ ಜೇಬಿಗೆ ಕತ್ತರಿ ಬಿದ್ದಿದೆ.  ವಾಹನಗಳ ಓಡಾಟದ ಹೆಚ್ಚಳದಿಂದ ಟೋಲ್ ಕಂಪೆನಿಗಳು ದೊಡ್ಡ ಮಟ್ಟದ ಲಾಭ ಗಳಿಸುತ್ತಿದ್ದು, ಹೂಡಿಕೆಯ ಬಂಡವಾಳ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ವಾಪಸ್ ಬರುತ್ತಿದೆ. ಫಾಸ್ಟ್ ಟ್ಯಾಗ್ ನಿಯಮದಿಂದ ಟೋಲ್ ಕಂಪೆನಿಗಳ ನಿರ್ವಹಣೆ ವೆಚ್ಚವೂ ಕಡಿಮೆಯಾಗಿದ್ದು, ಜನ ಸಾಮಾನ್ಯ ಮಾತ್ರ ಕೈ ಸುಟ್ಟುಕೊಳ್ಳುತ್ತಿದ್ದಾನೆ. ವರ್ಷದಿಂದ ವರ್ಷಕ್ಕೆ ಟೋಲ್ ಸುಂಕ ಕಡಿಮೆಯಾಗುವ ಬದಲು ಪ್ರತಿವರ್ಷ ಎಪ್ರಿಲ್ ನಲ್ಲಿ ಕಡ್ಡಾಯ ಎಂಬಂತೆ ಟೋಲ್ ದರವನ್ನು ಹೆಚ್ಚಿಸಲಾಗುತ್ತಿದೆ. ಇದು ಅಕ್ರಮ ಮಾತ್ರವಲ್ಲ ಸಂಕಷ್ಟದಲ್ಲಿರುವ ಜನರಿಂದ ಅಧಿಕಾರ ಬಲದ ಮೂಲಕ ಬಲವಂತವಾಗಿ ನಡೆಸುವ ಸುಲಿಗೆ ಎಂದು ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ. ಎ.1ರಂದು ಟೋಲ್ ದರ ಹೆಚ್ಚಳದ ಸಂದರ್ಭದಲ್ಲೇ ಆಯಾಯ ಭಾಗದ ‌‌ನಾಗರಿಕ ಸಂಘಟನೆಗಳು ರಾಜ್ಯದ ಟೋಲ್ ಗೇಟ್ ಗಳ ಮುಂಭಾಗದಲ್ಲಿ ಸ್ವಯಂ ಪ್ರೇರಣೆಯಿಂದ ಪ್ರತಿಭಟನೆ ನಡೆಸುವ ಮೂಲಕ ಸರಕಾರಗಳಿಗೆ ಪ್ರಬಲ ಎಚ್ಚರಿಕೆಯನ್ನು ರವಾನಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here