ಮಂಗಳೂರು: ಎಐಸಿಸಿ ನೇಮಕ ಮಾಡಿರುವ ಸ್ಕ್ರೀನಿಂಗ್ ಸಮಿತಿ ಇಂದು ಸಭೆ ನಡೆಸಲಿದೆ. ನಗರದ ಹೊರ ವಲಯದ ಖಾಸಗಿ ರೆಸಾರ್ಟ್‌ನಲ್ಲಿ ಇಂದು ಮಧ್ಯಾಹ್ನ ಸಭೆ ಆರಂಭವಾಗಲಿದ್ದು, ಬಾಕಿ ಇರುವ 100 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ವಾರದೊಳಗೆ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ. ಹೆಚ್ಚು ಪೈಪೋಟಿ ಇಲ್ಲದ 124 ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಪ್ರಕಟಿಸಿತ್ತು.
ಬಾಕಿ ಉಳಿದಿರುವ 100 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನೂ ತ್ವರಿತವಾಗಿ ಮುಗಿಸಲು ಕಾಂಗ್ರೆಸ್ ವರಿಷ್ಠರು ಕಸರತ್ತು ನಡೆಸುತ್ತಿದ್ದು, ಹೆಚ್ಚಿನ ಆಕಾಂಕ್ಷಿಗಳಿರುವ 100 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಮೊದಲ ಪಟ್ಟಿ ಪ್ರಕಟವಾದ ಬಳಿಕ ಬಾಕಿ ಉಳಿದಿರುವ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು ಕಾಂಗ್ರೆಸ್ ನಾಯಕರ ಮೇಲೆ ತೀವ್ರ ಒತ್ತಡ ಹೇರಲಾರಂಭಿಸಿದ್ದಾರೆ. ಎರಡನೇ ಪಟ್ಟಿಯನ್ನು ಅಂತಿಮಗೊಳಿಸುವುದು ವಿಳಂಬವಾದರೆ ಬಾಕಿ ಉಳಿದಿರುವ ಕ್ಷೇತ್ರಗಳಲ್ಲಿ ಆಂತರಿಕ ಪೈಪೋಟಿ ಹೆಚ್ಚಾಗಿ,ಪಕ್ಷ ಸಂಘಟನೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂಬ ಆತಂಕ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. ಈ ಕಾರಣದಿಂದ ಇಂದು ನಡೆಯಲಿರುವ ಸ್ಕ್ರೀನಿಂಗ್ ಸಮಿತಿ ಸಭೆ ಮಹತ್ವದ್ದಾಗಿರುತ್ತದೆ. ಮೊದಲ ಪಟ್ಟಿ ಪ್ರಕಟವಾದ ನಂತರ ಬಾಕಿ ಇರುವ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆಗಿರುವ ಬೆಳವಣಿಗೆಗಳ ಕುರಿತು ಸ್ಕ್ರೀನಿಂಗ್ ಸಮಿತಿ ಸದಸ್ಯರು ಪರಾಮರ್ಶೆ ನಡೆಸಲಿದ್ದಾರೆ. ಆ ಬಳಿಕ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ನಂತರ ದೆಹಲಿಯಲ್ಲಿ ಎಐಸಿಸಿ ವರಿಷ್ಠರು ಮತ್ತು ಸ್ಕ್ರೀನಿಂಗ್ ಸಮಿತಿ ಸದಸ್ಯರು ಮತ್ತೊಂದು ಸುತ್ತಿನ ಸಭೆ ನಡೆಸಿ ಬಳಿಕ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸ್ಕ್ರೀನಿಂಗ್ ಸಮಿತಿ ಅಧ್ಯಕ್ಷ ಮೋಹನ್ ಪ್ರಕಾಶ್, ಸದಸ್ಯರಾದ ನೀರಜ್ ಡಾಂಗಿ, ಮೊಹಮ್ಮದ್ ಜಾವೇದ್, ಸಪ್ತಗಿರಿ ಉಲಾಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಜಿ. ಪರಮೇಶ್ವರ ಸಭೆಯಲ್ಲಿ ಭಾಗವಹಿಸಲಿದ್ದಾರೆ.