ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ

ಮಂಗಳೂರು : ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ದಿನಾಂಕ ಘೋಷಣೆ ಮಾಡಿದ್ದು ಅದರಂತೆ ಎಪ್ರಿಲ್‌ ರಂದು ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಎಪ್ರಿಲ್‌ 20 ಕೊನೆಯ ದಿನಾಂಕವಾಗಿದ್ದು,ಎ.21 ನಾಮಪತ್ರ ಪರಿಶೀಲನೆ ನಡೆಯಲಿದ್ದು, ಎ.24  ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ಮೇ.10 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ.13ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ರಾಜ್ಯದ 224 ಕ್ಷೇತ್ರಗಳ ಪೈಕಿ 36 ಕ್ಷೇತ್ರ ಎಸ್‌ ಸಿ ಸಮುದಾಯಕ್ಕೆ ಮತ್ತು 15 ಕ್ಷೇತ್ರ ಎಸ್‌ ಟಿ ಸಮುದಾಯಕ್ಕೆ ಮೀಸಲು ಕ್ಷೇತ್ರವಾಗಿದೆ. ರಾಜ್ಯದಲ್ಲಿ ಒಟ್ಟು 5,21,73,579 ಮತದಾರರಿದ್ದು ಇವರಲ್ಲಿ 2,62,42,561 ಪುರುಷ  ಮತದಾರರಾಗಿದ್ದು, 2,59,26,319 ಮಹಿಳಾಮತದಾರರಾಗಿದ್ದಾರೆ. 80 ವರ್ಷ ಮೇಲ್ಪಟ್ಟ 12,15,763 ಮತದಾರಿದ್ದು, ಅವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಬಾರಿ 9,17,241 ಮಂದಿ ಮೊದಲ ಬಾರಿ ಮತದಾನ ಮಾಡಲಿದ್ದಾರೆ. ಅಂತೆಯೇ 5,55,073 ವಿಕಲಚೇತನರು ಮತ್ತು 4699 ತೃತೀಯ ಲಿಂಗಿಗಳು ಮತ ಚಲಾಯಿಸಲಿದ್ದಾರೆ. ಒಟ್ಟು 58,282 ಮತಗಟ್ಟೆಗಳಿದ್ದು, ನಗರ ಪ್ರದೇಶದಲ್ಲಿ 24,063 ಮತ್ತು ಗ್ರಾಮೀಣ ಪ್ರದೇಶದಲ್ಲಿ 34,219 ಮತಗಟ್ಟೆಗಳಿವೆ. ಗುಡ್ಡಗಾಡು ಪ್ರದೇಶದ ಜನರಿಗಾಗಿ 40 ಮತಗಟ್ಟೆಗಳಿದ್ದು, ಸುಮಾರು 400 ಪ್ರೆಂಡ್ಲಿ ಮತಗಟ್ಟೆಗಳಿವೆ. ಒಟ್ಟು ಮತಗಟ್ಟೆಗಳ ಪೈಕಿ 12,000 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾಗಿವೆ. ಎಪ್ರಿಲ್‌ 1 ಕ್ಕೆ  18 ವರ್ಷ ತುಂಬುವವರಿಗೆ ಈ ಬಾರಿ ಮತದಾನಕ್ಕೆ ಅವಕಾಶ ನೀಡಲಾಗಿದೆ. ರಾಜ್ಯದ 19 ಜಿಲ್ಲೆಗಳಲ್ಲಿ ಒಟ್ಟು 171 ಅಂತರ್‌ ರಾಜ್ಯ ಚೆಕ್‌ ಪೋಸ್ಟ್‌ ಗಳನ್ನು ಸ್ಥಾಪಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಉಪ ಆಯುಕ್ತರಾದ ಅನುಪ್‌ ಚಂದ್ರಪಾಂಡೆ , ಅರುಣ್‌ ಗೋಯಲ್‌ ,ನಿತೇಶ್‌ ಧರ್ಮೇಂದರ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here