ಮಂಗಳೂರು: ಕನ್ನಡದ ಮೊಸರಿನ ಬದಲು ಹಿಂದಿಯ ದಹಿ ಎಂಬ ಪದ ಬಳಸಲು ಕೆಎಂಎಪ್ ಗೆ,ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನೀಡಿರುವ ಆದೇಶಕ್ಕೆ ಕರ್ನಾಟಕ ಕನ್ನಡ ಹೋರಾಟಗಾರರು ಖಂಡನೆ ವ್ಯಕ್ತ ಪಡಿಸಿದ್ದಾರೆ. ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಮೊಸರಿನ ಪೊಟ್ಟಣದ ಮೇಲೆ ‘ದಹಿ’ ಎಂದು ಹಿಂದಿ ಪದ ಬಳಸಲು ಆದೇಶ ನೀಡಿರುವುದು ಕನ್ನಡಿಗರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲಿ ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೆಎಂಎಫ್‌ಗೆ ನೀಡಿರುವ ಆದೇಶವನ್ನು ಖಂಡಿಸಿದ್ದಾರೆ. ಯಾವುದೇ ಕಾರಣಕ್ಕೂ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಕೆಎಂಎಫ್ ಅಧಿಕಾರಿಗಳನ್ನು ಭೇಟಿ ಮಾಡಿರುವ ಹಲವು ಕನ್ನಡಪರ ಸಂಘಟನೆಗಳು, ಕರ್ನಾಟಕ ಹಾಲು ಒಕ್ಕೂಟವು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆದೇಶವನ್ನು ಪಾಲಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಇಂದು ದಹಿ, ನಾಳೆ ನಂದಿನಿ ದೂದ್, ನಂದಿನಿ ಪಾನಿ ಅಂದುಕೊಂಡು ಎಲ್ಲದಕ್ಕೂ ಹಿಂದಿ ಕಡ್ಡಾಯ ಮಾಡಿ ಕಡೆಗೆ ಕನ್ನಡವನ್ನೇ ಇಲ್ಲವಾಗಿಸೋ ಹುನ್ನಾರವಾಗಿದೆ. ಮೆಟ್ರೋ ಹಿಂದಿ ಹೇರಿಕೆ ತಡೆದ ಹಾಗೆ ನಂದಿನಿ ಮೇಲಿನ ಹಿಂದಿ ಹೇರಿಕೆ ತಡೆಯಬೇಕಿದೆ. ನಂದಿನಿ ಮೊಸರಿನ ಪೊಟ್ಟಣದ ಮೇಲೆ ದಹಿ ಎಂದು ಹಿಂದಿಯಲ್ಲಿ ಮುದ್ರಣವಾಗಿ ಬಂದರೆ ಸಾವಿರಾರು ಜನ ಕನ್ನಡಿಗರು ಕನ್ನಡ ಶಾಲುಗಳೊಂದಿಗೆ ಕೆಎಂಎಫ್ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೇ. ನಾವು ಕನ್ನಡಿಗರು ಹಿಂದಿ ಹೇರಿಕೆ ಸಹಿಸೋಲ್ಲ” ಎಂದು ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ತಿಳಿಸಿದ್ದಾರೆ.
ಹಿಂದಿ ಹೇರಿಕೆಗೆ ಕನ್ನಡಿಗರ ವಿರೋಧವಿದೆ ಎಂದು ಗೊತ್ತಿದ್ದರೂ ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ 'ದಹಿ' ಎಂದು ಮುದ್ರಿಸಿರುವುದು,ಅದನ್ನು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರವು ಕೆಎಂಎಫ್ ಗೆ ಆದೇಶ ನೀಡಿರುವುದು ತಪ್ಪು.ಇದನ್ನು ಒಪ್ಪಲು ಸಾಧ್ಯವಿಲ್ಲ.1/9#StopHindiImposition pic.twitter.com/fgAAeZURPQ
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 30, 2023