



ಮಂಗಳೂರು: ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ 75ರ ಅಡ್ಯಾರ್-ಕಣ್ಣೂರಿಗೆ ನೇರ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ಇಂದಿನಿಂದ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ.







ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಸೇತುವೆಯನ್ನು ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಸುವಂತಿಲ್ಲ. ಆದರೆ ಗ್ರಾಮಸ್ಥರು ಸೇತುವೆಯ ಬಳಕೆಗೆ ಅವಕಾಶ ಮಾಡಿಕೊಡುವಂತೆ ಸ್ಥಳೀಯ ಶಾಸಕ ಯು.ಟಿ. ಖಾದರ್ ಬಳಿ ಮನವಿ ಮಾಡಿಕೊಂಡ ಮೇರೆಗೆ ಅವರು ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ವಾಹನ ಸಂಚಾರಕ್ಕೆ ಅವಕಾಶ ಮಾಡಿದ್ದಾರೆ.



ಪಶ್ಚಿಮ ವಾಹಿನಿ ಯೋಜನೆಯಲ್ಲಿ ನೀರಾವರಿ ಇಲಾಖೆಯಡಿ ಅತಿದೊಡ್ಡ ಯೋಜನೆಯ ಕಾಮಗಾರಿ ಎನ್ನುವ ಖ್ಯಾತಿಯೂ ಈ ಸೇತುವೆಗಿದೆ. ಸೇತುವೆಯು 520 ಮೀ. ಉದ್ದವಿದ್ದು, 10.6 ಮೀ. ಎತ್ತರ, 10 ಮೀ. ಅಗಲ ಹಾಗೂ ಇಕ್ಕೆಲಗಳಲ್ಲಿ ಕಾಲುದಾರಿಯೂ ಇದೆ. ಅಣೆಕಟ್ಟಿನಿಂದ ಸಂಗ್ರಹವಾಗುವ ಸಿಹಿನೀರನ್ನು ಉಳ್ಳಾಲ ಪ್ರದೇಶದ ಮನೆ, ವ್ಯವಹಾರ ಕೇಂದ್ರಗಳಿಗೆ ಮೀಟರ್ ಅಳವಡಿಸಿ 24 ಗಂಟೆಯೂ ನೀರಿನ ವ್ಯವಸ್ಥೆ ಮಾಡುವ ಯೋಜನೆಯೂ ಇದೆ. ಈ ಸೇತುವೆಯು ಹರೇಕಳ ಗ್ರಾಮವಲ್ಲದೆ ಪಾವೂರು, ಕೊಣಾಜೆ, ಪಜೀರ್ ಗ್ರಾಮಸ್ಥರ ಪಾಲಿಗೆ ಮಂಗಳೂರು ಪ್ರಯಾಣ ಅತ್ಯಂತ ಹತ್ತಿರವಾಗಲಿದೆ. ದೇರಳಕಟ್ಟೆ-ಮಂಗಳೂರು ನಡುವಿನ ವಾಹನ ದಟ್ಟಣೆ ಸಮಸ್ಯೆ ನೀಗಿಸಲು ಸಹಕಾರಿಯಾಗಲಿದೆ.











