ಮಂಗಳೂರು: ನಿಷೇದಿತ ಇಂಡಿಯನ್ ಮುಜಾಹೀದೀನ್ ಉಗ್ರ ಸಂಘಟನೆಯ ಸಹ ಸಂಸ್ಥಾಪಕ ಯಾಸೀನ್ ಭಟ್ಕಳ್ ಹಾಗೂ ಇನ್ನಿತರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುವಂತೆ ದೆಹಲಿ ಹೈ ಕೋರ್ಟ್ ಎನ್ಐಎಗೆ ಸೂಚಿಸಿದೆ. 2012 ರಲ್ಲಿ ಗುಜರಾತ್ ನ ಸೂರತ್ ನಲ್ಲಿ ಬಾಂಬ್ ದಾಳಿ ನಡೆಸಲು ಸಂಚು ಮಾಡಿದ್ದ ಪ್ರಕರಣದಲ್ಲಿ ಯಾಸೀನ್ ಭಟ್ಕಳ್ ನನ್ನು ಬಂದಿಸಲಾಗಿತ್ತು.
ಸ್ಫೋಟಕ್ಕೆ ಸಂಚು ರೂಪಿಸಿದ್ದಲ್ಲದೆ ಸುಧಾರಿತ ಸ್ಪೋಟಕ ಸಾಧನ ವಿನ್ಯಾಸಗೊಳಿಸುವುದರಲ್ಲಿಯೂ ಆತ ನಿಸ್ಸಿಮನಾಗಿದ್ದ. ಇಂಡಿಯನ್ ಮುಜಾಹೀದೀನ್ ಸಂಘಟನೆಯ ಚಟುವಟಿಕೆಗಳಿಗೆ ವಿದೇಶದಿಂದ ಹವಾಲ ರೂಪದಲ್ಲಿ ಹಣ ಬರುತ್ತಿತ್ತು ಎಂದು ತನಿಖೆ ನಡೆಸುತ್ತಿರುವ ಎನ್ಐಎ ನ್ಯಾಯಾಲಯಕ್ಕೆ ತಿಳಿಸಿದೆ.
ಭಟ್ಕಳದಲ್ಲಿ ವಶಪಡಿಸಿಕೊಳ್ಳಲಾದ ವಸ್ತುಗಳಿಂದ ಪಡೆಯಲಾಗಿರುವ ಡಿಜಿಟಲ್ ದತ್ತಾoಶಗಳಲ್ಲಿ ಜಿಹಾದಿ ಬರಹಗಳು ಮತ್ತು ಜಿಹಾದಿ ಹೆಸರಲ್ಲಿ ಮುಸ್ಲಿಮೇತರರನ್ನು ಕೊಲೆ ಮಾಡುವುದನ್ನು ಸಮರ್ಥಿಸುವ ಸಾಹಿತ್ಯಗಳು ಇದ್ದು ಈ ಸಾಕ್ಷ್ಯಗಳು ಆರೋಪಿಗಳ ವಿಚಾರಣೆಗೆ ಸಾಕು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೆಂದ್ರ ಮಲಿಕ್ ಅಭಿಪ್ರಾಯ ಪಟ್ಟಿದ್ದಾರೆ. ಯಾಸಿನ್ ಭಟ್ಕಳ್ ನಡೆಸಿದ ಸಂಭಾಷಣೆಯಲ್ಲಿ ಸೂರತ್ ನಲ್ಲಿ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿರುವುದು ಸಾಬೀತಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.