ಮಂಗಳೂರು: ಮಕ್ಕಳ ಕಳ್ಳರೆಂದು ಶಂಕಿಸಿ ಕಾರನ್ನು ಬೆನ್ನಟ್ಟಿ, ಕಾರಿನಲ್ಲಿದ್ದವರಿಗೆ ಥಳಿಸಿ, ಕಾರಿಗೆ ಬೆಂಕಿ ಹಚ್ಚಿರುವ ಘಟನೆ ಬಾಗಲಕೋಟೆಯ ಖಜ್ಜಿಡೋಣಿ ಗ್ರಾಮದ ಬಳಿ ಎ.7 ರಂದು ನಡೆದಿದೆ.
ಬಾಗಲಕೋಟೆ ನಿವಾಸಿಗಳಾದ ರಾಹುಲ್ ಮತ್ತು ಕಿರಣ್ ಮುಧೋಳದ ಕೆ ಡಿ ಬುದ್ನಿ ಗ್ರಾಮದಲ್ಲಿರುವ ಸ್ನೇಹಿತೆಯ ಮನೆಗೆ ಹೋಗುವ ವೇಳೆ ಕಾರಿನಲ್ಲಿರುವವರು ಮಕ್ಕಳ ಕಳ್ಳರೆಂದು ಭಾವಿಸಿದ ಗ್ರಾಮಸ್ಥರು ಚಿಕ್ಕೂರು ಗ್ರಾಮದಲ್ಲಿ ಕಾರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಇದರಿಂದ ಭಯಗೊಂಡ ಕಾರಿನಲ್ಲಿದ್ದ ಯುವಕರು ಕಾರಿನ ವೇಗವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಬೆನ್ನು ಬಿಡದ ಗ್ರಾಮಸ್ಥರು ಕಾರನ್ನು ತಡೆದು ಯುವಕರಿಗೆ ಥಳಿಸಿದ್ದಾರೆ. ಇದೆ ವೇಳೆ ಕೆಲವರು ಕಾರಿಗೆ ಬೆಂಕಿ ಹಚ್ಚಿದ್ದು ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಲೋಕಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಯುವಕರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಯುವಕರಿಬ್ಬರು ಬಾಗಲಕೋಟೆಯವರು, ಮಕ್ಕಳ ಕಳ್ಳರು ಎಂಬ ತಪ್ಪು ಭಾವನೆಯಿಂದ ಘಟನೆ ಸಂಭವಿಸಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕಪ್ಪು ಟಿಂಟೆಡ್ ಗ್ಲಾಸ್ ಹೊಂದಿರುವ ಕಪ್ಪು ಕಾರಿನಲ್ಲಿ ಯುವಕರು ಗ್ರಾಮಕ್ಕೆ ತೆರಳಿದ್ದು ಎರಡು ಮೂರು ಬಾರಿ ಪ್ರಮುಖ ರಸ್ತೆಯಲ್ಲಿ ಓಡಾಡಿದ್ದಾರೆ. ಸ್ಥಳೀಯ ಪಾನ್ ಶಾಪ್ ನಲ್ಲಿ ಸಿಗರೇಟು ಹಚ್ಚಿ ಗ್ರಾಮದಲ್ಲಿ ತಿರುಗಾಡಿದ್ದಾರೆ. ಸಂಶಯಗೊಂಡ ಗ್ರಾಮಸ್ಥರು ಇವರ ಬಳಿ ಬಂದಾಗ ಭಯಪಟ್ಟು ಕಾರು ಹತ್ತಿ ಹೊರಟಿದ್ದಾರೆ. ಈ ವೇಳೆ ಗ್ರಾಮಸ್ಥರು ಮಕ್ಕಳ ಕಳ್ಳರಿರಬಹುದೆಂದು ಕಾರಿನೆಡೆಗೆ ಕಲ್ಲು ತೂರಿದ್ದಾರೆ. ಮಾತ್ರವಲ್ಲ ಪಕ್ಕದ ಗ್ರಾಮದ ಸ್ನೇಹಿತರಿಗೆ ಮೊಬೈಲ್ ಮೂಲಕ ಕರೆಮಾಡಿ ಕಾರು ತಡೆಯುವಂತೆ ಸೂಚಿಸಿದ್ದಾರೆ. ಕೊನೆಗೂ ಕಾರು ತಡೆಯುವಲ್ಲಿ ಯಶಸ್ವಿಯಾದ ಗ್ರಾಮಸ್ಥರು ಯುವಕರಿಗೆ ಥಳಿಸಿ, ಕಾರು ಜಖಂ ಗೊಳಿಸಿ ಬೆಂಕಿ ಹಚ್ಚಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ