ಮಂಗಳೂರು: ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ತಯಾರಿ ಅಂತಿಮ ಹಂತದಲ್ಲಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಬಗ್ಗೆ ಚರ್ಚೆ ನಡೆಸಿದ್ದೇವೆ. ಗೃಹ ಸಚಿವ ಅಮಿತ್ ಶಾ ರಾಜಧಾನಿಯಲ್ಲಿಲ್ಲ, ಅವರು ಮಂಗಳವಾರ ಸಂಜೆ ದೆಹಲಿಗೆ ಮರಳುವ ನಿರೀಕ್ಷೆಯಿದೆ. ಶಾ ಮತ್ತು ನರೇಂದ್ರ ಮೋದಿ ಮತ್ತೊಮ್ಮೆ ಸಭೆ ನಡೆಸಿ ಬಳಿಕ ಪಟ್ಟಿಯನ್ನು ಪ್ರಕಟಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಮಂಗಳವಾರ ತಡರಾತ್ರಿ ಅಥವಾ ಬುಧವಾರ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದು, ಬಿಜೆಪಿ ಪಕ್ಷವು ಚುನಾವಣೆಯ ಕೆಲವು ಮಾರ್ಗಸೂಚಿಗಳನ್ನು ಹೊಂದಿದ್ದು, ಅದರ ಆಧಾರದ ಮೇಲೆ ಟಿಕೆಟ್ ಎಂದು ತಿಳಿಸಿದ್ದಾರೆ. ಸೋಮವಾರ ಬೆಂಗಳೂರಿಗೆ ಬಂದಿಳಿದ ಬಿಎಸ್ವೈ ಮಂಗಳವಾರ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದರು. ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಹಲವು ಸಮೀಕ್ಷೆಯ ವರದಿಗಳ ಪ್ರಕಾರ ಬಿಜೆಪಿಗೆ ಬಹುಮತದ ಕೊರತೆ ಇದ್ದು ಹೀಗಾಗಿ, ಪಕ್ಷವು ಮತ್ತೆ ಅಧಿಕಾರ ಪಡೆಯಲು ಬೇಕಾದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ, ಮಾತ್ರವಲ್ಲದೆ ಸೋಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅಪಾಯವನ್ನು ತಂದೊಡ್ಡಲು ಸಿದ್ಧರಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ. ಸದ್ಯ ಚೆಂಡು ಬಿಜೆಪಿ ಹೈಕಮಾಂಡ್ ಅಂಗಳದಲ್ಲಿದ್ದು, 24ರಿಂದ 48 ಗಂಟೆಯೊಳಗಾಗಿ ಪಕ್ಷದ ಟಿಕೆಟ್ ಯಾರಿಗುಂಟು ಯಾರಿಗಿಲ್ಲ ಎಂದು ತಿಳಿಯಲಿದೆ.