ಮಂಗಳೂರು: ಆಹಾರ ಅರಸಿ ನಾಡಿಗೆ ಬಂದ ಕಾಡಾನೆಗಳು ತೋಟಕ್ಕೆ ನುಗ್ಗಿ ಗಿಡ ಮರಗಳ ಚೆಂಡಾಡಿ ಅಲ್ಲಿದ್ದ ಕೆರೆಗೆ ಬಿದ್ದ ಘಟನೆ ಸುಳ್ಯದ ಅಜ್ಜಾವರ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ಸಂತೋಷ್ ರೈ ಎಂಬವರ ತೋಟದಲ್ಲಿರುವ ಕೆರೆಗೆ ಎರಡು ಮರಿಯಾನೆ ಮತ್ತು ಎರಡು ದೊಡ್ಡ ಆನೆ ಬಿದ್ದಿದೆ. ಕೆರೆಗೆ ಬಿದ್ದ ಆನೆಗಳು ಮೇಲೆ ಬರಲಾಗದೆ ರಾತ್ರಿಯಿಡೀ ಘೀಳಿಡುತ್ತದ್ದು, ಗುರುವಾರ ಬೆಳೆಗ್ಗೆ ಅರಣ್ಯ ಇಲಾಖೆ ಸ್ಥಳೀಯರ ನೆರವಿನೊಂದಿಗೆ ಆನೆಗಳನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಕರೆಯ ಒಂದು ಭಾಗದಲ್ಲಿ ಅಗೆದು ದೊಡ್ಡ ಗಾತ್ರದ ಎರಡು ಆನೆಗಳು ಮೇಲಕ್ಕೆ ಬಂದು ಕಾಡು ಸೇರಿದರೆ, ಒಂದು ಮರಿಯಾನೆ ಪ್ರಯಾಸ ಪಟ್ಟು ಅದೇ ದಾರಿಯಲ್ಲಿ ಮೇಲೆ ಬಂದಿದೆ. ಇನ್ನೊಂದು ಮರಿಯಾನೆಯ ಕತ್ತಿಗೆ ಗೆ ಹಗ್ಗ ಹಾಕಿ, ಇಲಾಖಾ ಸಿಬ್ಬಂದಿಗಳು ಮತ್ತು ಸ್ಥಳೀಯ ಕೆಲ ಯುವಕರು ಕೆರೆಗೆ ಇಳಿದು ಆನೆ ಮರಿಯನ್ನು ದೂಡಿ ಮೇಲಕ್ಕೆತ್ತಲಾಯಿತು. ಆಯಾಸಗೊಂಡು ನಡೆಯಲು ಕಷ್ಟ ಪಡುತ್ತಿದ್ದ ಕರಿಮರಿಯನ್ನು ದೂಡಿಕೊಂಡೇ ಕಾಡಂಚಿಗೆ ಸಾಗಿಸಲಾಯಿತು. ತೋಟಕ್ಕೆ ಬಂದು ಕೆರೆಗೆ ಬಿದ್ದಿರುವ ಕಾಡಾನೆಗಳನ್ನು ಹಿಡಿದು ಇಲ್ಲಿಂದ ದೂರಕ್ಕೆ ಸಾಗಿಸಬೇಕು ಎಂದು ಕೃಷಿಕ ನವೀನ್ ರೈ ಮೇನಾಲ ಮತ್ತು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಅಜ್ಜಾವರ, ಮಂಡೆಕೋಲು, ಆಲೆಟ್ಟಿ ಈ ಭಾಗದಲ್ಲಿ ಕಾಡಾನೆಗಳು ನಿರಂತರ ತೋಟಕ್ಕೆ ನುಗ್ಗಿ ಕೃಷಿ ಹಾನಿಗೆಡಹುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ