ಮಂಗಳೂರು : ಕೆಲ ತಿಂಗಳುಗಳ ಹಿಂದೆ ಡಿಜಿಟಲ್ ಫ್ಲ್ಯಾಟ್ ಫಾರ್ಮ್ ಗಳಾದ ದಿ ನ್ಯೂಸ್ ಮಿನಿಟ್ ಮತ್ತು ಪ್ರತಿದ್ವನಿ ಮೊದಲ ಬಾರಿಗೆ ಮತದಾರರ ಮಾಹಿತಿ ಕಳ್ಳತನದ ಬಗ್ಗೆ ಬಹಿರಂಗಗೊಳಿಸಿತ್ತು.
ಇದಾದ ಬಳಿಕ ಚುನಾವಣಾ ಆಯೋಗವು ದೊಡ್ಡ ಪ್ರಮಾಣದಲ್ಲಿ ಮತದಾರರ ಮಾಹಿತಿಗಳ ಕಳ್ಳತನದ ಬಗ್ಗೆ ತನಿಖೆ ನಡೆಸಿದೆ. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ನಡೆಸಿರುವ ತನಿಖೆಯು ದಿ ನ್ಯೂಸ್ ಮಿನಿಟ್ ತನ್ನ ವರದಿಯಲ್ಲಿ ಬಹಿರಂಗಗೊಳಿಸಿದ್ದ ಅಂಶಗಳನ್ನು ಎತ್ತಿ ಹಿಡಿದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಖಾಸಗಿ ಟ್ರಸ್ಟ್ ಚಿಲುಮೆಗೆ ಮತದಾರರ ಮಾಹಿತಿಗಳನ್ನು ಸಂಗ್ರಹಿಸಲು ಅವಕಾಶ ನೀಡುವ ಮೂಲಕ ಅದಕ್ಕೆ ಕಾನೂನುಬಾಹಿರ ಮತ್ತು ಅನುಚಿತ ಅನುಕೂಲಗಳನ್ನು ಒದಗಿಸಿತ್ತು. ಮಾತ್ರವಲ್ಲ ಟ್ರಸ್ಟ್ ವಿರುದ್ಧ ಸಲ್ಲಿಸಲಾಗಿದ್ದ ದೂರನ್ನು ವಿಫಲಗೊಳಿಸಲು ಪ್ರಯತ್ನಿಸಿದ್ದರು ಎನ್ನುವುದನ್ನು ತನಿಖೆಯು ಬಹಿರಂಗಗೊಳಿಸಿದೆ.