ಬೆಂಗಳೂರು : ರಾಘವೇಶ್ವರ ಶ್ರೀ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.
ಪುತ್ತೂರಿನಲ್ಲಿ ರಾಮ ಚಂದ್ರಾಪುರ ಮಠದ ಭಕ್ತರೆನ್ನಲಾದ ಬಂಟ್ವಾಳ ಸಮೀಪದ ಕೆದಿಲ ನಿವಾಸಿ ಶಾಂಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣದಲ್ಲಿ ರಾಘವೇಶ್ವರ ಶ್ರೀ ಹಾಗೂ ಆರ್ ಎಸ್ ಎಸ್ ನಾಯಕ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧದ ಆರೋಪಗಳನ್ನು ಹೈಕೋರ್ಟ್ ರದ್ದು ಪಡಿಸಿದೆ. ರಾಘವೇಶ್ವರ ಶ್ರೀಗಳ ವಿರುದ್ಧ ಹಲವು ಪ್ರಕರಣಗಳು ಮುನ್ನಡೆಗೆ ಬಂದ ಸಂದರ್ಭದಲ್ಲಿ ನಡೆದ ಶಾಸ್ತ್ರಿ ಆತ್ಮಹತ್ಯೆ ಪ್ರಕರಣ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ರಾಮ ಚಂದ್ರಾಪುರ ಮಠದ ಭಕ್ತ ಎನ್ನಲಾಗಿದ್ದ ಶಾಮಪ್ರಸಾದ್ ಶಾಸ್ತ್ರಿ ಎಂಬವರು ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 2014ರ ಆಗಸ್ಟ್ 31 ರಂದು ನಡೆದಿದ್ದ ಈ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ರಾಮಚಂದ್ರಪುರ ಮಠದವರ ಬೆದರಿಕೆಯೇ ಈ ಘಟನೆಗೆ ಕಾರಣ ಎಂದು ಮೃತರ ಪತ್ನಿ ದೂರಿದ್ದರು. ಬಳಿಕ ನಡೆದ ಬೆಳವಣಿಗೆಯಲ್ಲಿ ರಾಘವೇಶ್ವರ ಶ್ರೀ ಉದ್ಯಮಿ ಬೋನಂತಾಯ ಶಿವಶಂಕರ್ ಭಟ್ ಮತ್ತು ಆರ್ ಎಸ್ ಎಸ್ ನಾಯಕ ಪ್ರಭಾಕರ್ ಭಟ್ ಅವರನ್ನು ಆರೋಪಿಗಳೆಂದು ಪರಿಗಣಿಸಿ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಗಂಭೀರ ಪ್ರಕರಣದಲ್ಲಿ ಆರ್ ಎಸ್ ಎಸ್ ನಾಯಕ ಪ್ರಭಾಕರ್ ಭಟ್ ಪರವಾಗಿ ಹಿರಿಯ ವಕೀಲ ಪಿ ಪಿ ಹೆಗಡೆ ಹೈಕೋರ್ಟ್ ನಲ್ಲಿ ವಾದಿಸಿದ್ದರು. ಇದೇ ಸಮಯದಲ್ಲಿ ರಾಘವೇಶ್ವರ ಶ್ರೀಗಳು ತಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡಲಾಗಿದೆ ಎಂದು ಕೋರ್ಟಿನ ಗಮನ ಸೆಳೆದಿದ್ದರು. ಹೈಕೋರ್ಟಿನಲ್ಲಿ ಕುತೂಹಲದ ಕೇಂದ್ರಬಿಂದು ವಾಗಿದ್ದ ಈ ವಿಚಾರಣೆ ವೇಳೆ ಪ್ರಭಾಕರ್ ಭಟ್ ಪರ ವಾದ ಮಂಡಿಸಿದ ಪಿ ಪಿ ಹೆಗಡೆ ಗಣ್ಯರ ವಿರುದ್ಧ ದುರುದ್ದೇಶದಿಂದ ಪ್ರಚೋದನೆಯ ಸುಳ್ಳು ಆರೋಪ ಹೊರಿಸಲಾಗಿದೆ. ಯಾವುದೇ ಸಾಕ್ಷಾಧಾರವಿಲ್ಲದೆ ಸಿಐಡಿ ಪೊಲೀಸರು ದೋಷಾರೋಪೋರಿಸಿದ್ದಾರೆ ಎಂದು ನ್ಯಾಯಪೀಠದ ಗಮನ ಸೆಳೆದರು. ವಾದ ಆಲಿಸಿದ ಹೈಕೋರ್ಟ್ ಪೀಠ ರಾಘವೇಶ್ವರ ಶ್ರೀ ಹಾಗೂ ಡಾಕ್ಟರ್ ಪ್ರಭಾಕರ್ ಭಟ್ ವಿರುದ್ಧದ ದೋಷಾರೋಪವನ್ನೇ ರದ್ದು ಪಡಿಸಿ ತೀರ್ಪು ನೀಡಿ ಆದೇಶ ಹೊರಡಿಸಿದೆ.