ಮಂಗಳೂರು: ತನ್ನ ಗುಣನಡತೆಗಳನ್ನು ಆಕ್ಷೇಪಿಸಿ ಗದರುತ್ತಿದ್ದ ಅಜ್ಜಿಯನ್ನು ಕೊಂದ ಮೊಮ್ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಗಾಯತ್ರಿ ಪುರಂ ಲೇಔಟ್ ನಿವಾಸಿ 23 ವರ್ಷದ ಸುಪ್ರೀತ್ ತನ್ನ ಸ್ವಂತ ಅಜ್ಜಿ 75ರ ಹರೆಯದ ಸುಲೋಚನಾ ಎಂಬವರನ್ನು ಕೊಲೆ ಮಾಡಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಮೇ 28ರಂದು ಅಜ್ಜಿ ಮತ್ತು ಮೊಮ್ಮಗನ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ಸುಪ್ರೀತ್ ಅಜ್ಜಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಬಳಿಕ ಮೃತ ದೇಹವನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ರಟ್ಟಿನ ಪೆಟ್ಟಿಗೆ ಒಂದರಲ್ಲಿ ಹಾಕಿಟ್ಟಿದ್ದ. ಮೃತ ದೇಹವನ್ನು ಹೇಗೆ ವಿಲೇವಾರಿ ಮಾಡಬೇಕೆಂದು ತಿಳಿಯದೆ ದಿನವಿಡೀ ಕಾರಿನಲ್ಲಿ ಮೈಸೂರು ನಗರದಲ್ಲಿ ಸುತ್ತಾಡಿದ್ದ. ಬಳಿಕ ನಜರಾಬಾದ್ ಪೊಲೀಸ್ ಠಾಣೆಗೆ ತೆರಳಿ ಅಜ್ಜಿ ನಾಪತ್ತೆಯಾಗಿರುವ ಬಗ್ಗೆ ಪ್ರಕರಣವನ್ನು ದಾಖಲಿಸಿದ್ದ. ಮೇ 30ರಂದು ವೃದ್ದೆಯ ಸುಟ್ಟು ಕರಕಲಾಗಿದ್ದ ಶವವನ್ನು ಪೊಲೀಸರು ಪತ್ತೆ ಮಾಡಿದ್ದರು. ನಾಪತ್ತೆಯಾದ ವೃದ್ದೆಗೂ ಶವದಲ್ಲಿ ದೊರೆತ ಕೆಲವೊಂದು ವಸ್ತುಗಳಿಗೂ ಸಾಮ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಸುಪ್ರೀತನನ್ನು ವಿಚಾರಿಸಿದಾಗ ಸತ್ಯ ಸಂಗತಿ ಬೆಳಕಿಗೆ ಬಂದಿದೆ. ಕೊರಿಯನ್ ವೆಬ್ ಸೀರೀಸ್ ನೋಡುತ್ತಿದ್ದ ಸುಪ್ರೀತ್ ಅದರಂತೆ ಅಜ್ಜಿಯನ್ನು ಬೆಂಕಿ ಹಚ್ಚಿ ಕೆ ಆರ್ ಎಸ್ ಆಣೆಕಟ್ಟಿನ ಹಿನ್ನೀರಿನಲ್ಲಿ ಎಸೆದಿದ್ದ ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ.