ಮಂಗಳೂರು: ಬಂಟ್ವಾಳ ತಾಲೂಕಿನ ಯುವಕನ ಮೃತ ದೇಹ ಮೂಡಿಗೆರೆಯ ಚಾರ್ಮಾಡಿ ಘಾಟಿ ಸಮೀಪದ ದೇವರ ಮನೆ ರಸ್ತೆ ತಿರುವು ಬಳಿಯ ನಿರ್ಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಇರಾ ಗ್ರಾಮದ ಕುಕ್ಕಾಜೆ ಕಾಪಿಕಾಡು ನಿವಾಸಿ ದಿವಂಗತ ಅಬ್ಬಾಸ್ ಎಂಬವರ ಪುತ್ರ ಸವಾದ್ ಎಂದು ಗುರುತಿಸಲಾಗಿದೆ.
ಮೃತ ಸವಾದ್ 10 ದಿನಗಳಿಂದ ಕಾಣೆಯಾಗಿದ್ದು ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ. ಈ ಹಿಂದೆ ಕೂಡ ಈತ ಇದೇ ತರಹ ಸಂಪರ್ಕಕ್ಕೆ ಸಿಗದೇ ಕೆಲವು ದಿನಗಳ ಬಳಿಕ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಮನೆಯವರು ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಈತನ ಅಣ್ಣನಿಗೆ ಸವಾದನ ಕೊಲೆಯಾಗಿರುವ ಬಗ್ಗೆ ವ್ಯಕ್ತಿಯೋರ್ವರು ಮಾಹಿತಿ ನೀಡಿದ್ದು, ಮಾಹಿತಿ ಆಧರಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತ ಶರೀರದ ಗುರುತು ಪತ್ತೆ ಹಚ್ಚಿದ್ದಾರೆ. ಮೃತ ದೇಹದ ಗುರುತು ಸಿಗದ ರೀತಿಯಲ್ಲಿ ಮುಖಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದ್ದು ಮಾದಕ ವ್ಯಸನಿಗಳ ತಂಡ ಈ ಕೃತ್ಯ ಎಸಗಿದೆ ಎಂದು ದೂರಲಾಗಿದೆ. ಘಟನಾ ಸ್ಥಳಕ್ಕೆ ಬಣಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಂತಕರು ಕಾವಳಕಟ್ಟೆ ವಗ್ಗ ಮೂಲದ ಡ್ರಗ್ ಪೆಡ್ಲರ್ ತಂಡದವರು ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.