ಚುನಾವಣೆ ಹೊಸ್ತಿಲಲ್ಲಿರುವ ಮಧ್ಯಪ್ರದೇಶ ಸರಕಾರದ ಮುಖ್ಯ ಕಚೇರಿಗೆ ಬೆಂಕಿ – ಕಡತಗಳು ಭಸ್ಮ

ಮಂಗಳೂರು: ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಸಾತ್ಪುರ ಭವನಕ್ಕೆ ಬೆಂಕಿ ಹತ್ತಿಕೊಂಡಿದ್ದು, ಭವನದ ಮೂರು ಮಹಡಿಗಳಿಗೆ ಬೆಂಕಿ ವ್ಯಾಪಿಸಿ ಅಲ್ಲಿದ್ದ ಎಲ್ಲಾ ಕಡತಗಳು ಸಂಪೂರ್ಣ ಸುಟ್ಟು ಹೋಗಿವೆ.

ಮಧ್ಯಾಹ್ನ 3 ಗಂಟೆ ವೇಳೆಗೆ ಮೂರನೇ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ. ಅಧಿಕಾರಿಗಳ ಸಮನ್ವಯದ ಕೊರತೆಯಿಂದಾಗಿ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಐದನೇ ಮಹಡಿಯಲ್ಲಿದ್ದ ಆರೋಗ್ಯ ಇಲಾಖೆ, ಲೋಕಾಯುಕ್ತದ ದೂರು ಶಾಖೆ, ವೈದ್ಯಕೀಯ ದಾಖಲೆಗಳ ಶಾಖೆ ಮತ್ತು ಹೂಡಿಕೆ ನೀತಿ ಕಚೇರಿಯ ಸಾವಿರಾರು ಕಡತಗಳು ಸುಟ್ಟು ಹೋಗಿವೆ. ಆರನೇ ಮಹಡಿಯಲ್ಲಿ ಭಾರತೀಯ ಆಡಳಿತ ಸೇವೆ ಮತ್ತು ರಾಜ್ಯ ಆಡಳಿತ ಸೇವೆ ಮತ್ತಿತರರ ಸೇವಾ ಪುಸ್ತಕಗಳು ಸುಟ್ಟು ಬೂದಿಯಾಗಿದೆ.

ಕಳೆದ ಒಂದು ದಶಕದಲ್ಲಿ ಮೂರನೇ ಬಾರಿಗೆ ಸಾತ್ಪುರ ಭವನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾಕತಾಳೀಯ ಎನ್ನುವಂತೆ 2012 ಮತ್ತು 2018ರ ವಿಧಾನಸಭಾ ಚುನಾವಣೆಗೆ ಮುನ್ನ ಬೆಂಕಿ ಹತ್ತಿಕೊಂಡಿತ್ತು. ಈ ಬಾರಿ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಈ ಸರ್ಕಾರಿ ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಹತ್ತಿಕೊಂಡಿದೆ. ಇದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಮೂಲಗಳ ಪ್ರಕಾರ ಮರದ ವಸ್ತುಗಳಿಂದ ಹೊಸದಾಗಿ ನವೀಕರಿಸಿದ ಕಚೇರಿಗಳಿಗೆ ಬೆಂಕಿ ಆವರಿಸಿಕೊಂಡು ಸುಮಾರು ಒಂದು ಗಂಟೆ ತಡವಾಗಿ ಅಗ್ನಿಶಾಮಕ ಕಚೇರಿಗೆ ಕರೆ ಮಾಡಲಾಗಿದೆ.

ಮಹಾನಗರ ಪಾಲಿಕೆಯ ಎಲ್ಲಾ ನೀರಿನ ಟ್ಯಾಂಕರ್ ಗಳನ್ನು ಹಾಲಿ ಸಚಿವ ವಿಶ್ವಾಸ್ ಸಾರಂಗ್ ಆಯೋಜಿಸಿದ್ದ ವಿಷ್ಣು ಪುರಾಣ ಕಥಾ‌ಪ್ರವಚನಕ್ಕೆ ಕಳುಹಿಸಿದ್ದರಿಂದ ಅಗ್ನಿಶಾಮಕ ಸಿಬ್ಬಂದಿಯು ನೀರಿಗಾಗಿ ಪರದಾಡುವಂತಾಗಿತ್ತು. ಜಬಲ್ಪುರದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಆಡಳಿತರೂಢ ಸರಕಾರದ ಭ್ರಷ್ಟಾಚಾರದ ಕುರಿತು ವಾಗ್ದಾಳಿ ನಡೆಸಿದ್ದರು. ಅವರ ಭಾಷಣದ ಒಂದು ಗಂಟೆಯ ಬಳಿಕ ಸಾತ್ಪುರ ಭವನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಡಳಿತರೂಢ ಬಿಜೆಪಿ ಉದ್ದೇಶಪೂರ್ವಕವಾಗಿ ಘಟನೆ ಸಂಭವಿಸುವಂತೆ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಘಟನೆಯಲ್ಲಿ 12 ಸಾವಿರ ಪ್ರಮುಖ ಕಡತಗಳು ಸುಟ್ಟು ಕರಕಲಾಗಿವೆ.

LEAVE A REPLY

Please enter your comment!
Please enter your name here