ಮಂಗಳೂರು: ಕರ್ನಾಟಕದ ಶಾಸಕರಿಗೆ ಪ್ರತಿ ತಿಂಗಳು ದೂರವಾಣಿ ಭತ್ಯೆ ಎಂದು 20 ಸಾವಿರ ರೂಪಾಯಿ ಕೊಡುತ್ತಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ದುಂದು ವೆಚ್ಚಕ್ಕೆ ಕಡಿವಾಣ ಹಾಕುವಂತೆ ಒತ್ತಾಯ ಕೇಳಿ ಬಂದಿದೆ.
ಕೇವಲ 700 ರೂಪಾಯಿ ರಿಚಾರ್ಜ್ ಮಾಡಿದರೆ ಪ್ರತಿದಿನ ಮೂರು ಜಿಬಿ ಹೈ ಸ್ಪೀಡ್ ಡಾಟಾದೊಂದಿಗೆ ಎಷ್ಟು ಬೇಕಾದರೂ ಕರೆ ಮಾಡುವ ಸೌಲಭ್ಯವಿದೆ. ಹೀಗಿರುವಾಗ ಪ್ರತಿ ತಿಂಗಳು 20 ಸಾವಿರ ಕೊಡುವುದು ಸರಿಯಲ್ಲ. ಇದಕ್ಕೆ ಬ್ರೇಕ್ ಹಾಕಿದರೆ ಪ್ರತಿ ತಿಂಗಳು 11 ಬಡವರಿಗೆ ಉಚಿತವಾಗಿ ಮನೆ ಕಟ್ಟಿಕೊಡಬಹುದು ಎಂದು ವ್ಯಕ್ತಿಯೊಬ್ಬರು ಮುಖ್ಯಮಂತ್ರಿಯವರ ಗಮನ ಸೆಳೆದಿದ್ದಾರೆ.
ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಹೋರಾಟಗಾರ ಅಶೋಕ್ ಕೆ ಎಂಬವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದು, ಈ ಅವೈಜ್ಞಾನಿಕ ಹಾಗೂ ಅಪ್ರಸ್ತುತ ಭತ್ಯೆಯನ್ನು ವಾಪಾಸ್ ಪಡೆಯುವಂತೆ ಆಗ್ರಹಿಸಿದ್ದಾರೆ. ಇಂತಹ ವೆಚ್ಚಗಳಿಗೆ ಸಿದ್ದರಾಮಯ್ಯ ಸರಕಾರ ಬ್ರೇಕ್ ಹಾಕಬೇಕು, ಅನಗತ್ಯ ದುಂದುವೆಚ್ಚ ನಿಲ್ಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.