ಮಂಗಳೂರು: ಪ್ರಧಾನ ಮಂತ್ರಿ ಫಸಲು ಭಿಮಾ ಯೋಜನೆಯಲ್ಲಿ ಅಡಿಕೆ ಮತ್ತು ಕಾಳು ಮೆಣಸನ್ನು ಸೇರ್ಪಡೆಗೊಳಿಸುವಲ್ಲಿ ಶಾಸಕ ಅಶೋಕ್ ಕುಮಾರ್ ರೈ ಯಶಸ್ವಿಯಾಗಿದ್ದಾರೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಖುಷಿ ತಂದುಕೊಟ್ಟಿದೆ.
ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯ ಅವಧಿ ಮುಗಿಯುತ್ತಾ ಬಂದರೂ ಪ್ರೀಮಿಯಂ ಪಾವತಿಯ ಬಗ್ಗೆ ರೈತರಿಗೆ ಯಾವುದೇ ಸೂಚನೆ ನೀಡದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ಪ್ರಮುಖ ಅಡಿಕೆ ಮತ್ತು ಕಾಳುಮೆಣಸನ್ನು ಯೋಜನೆಯಿಂದ ಹೊರಗಿಡಲಾಗಿದೆ ಎಂದು ವರದಿಯಾಗಿತ್ತು. ಇದರಿಂದ ಇಲ್ಲಿನ ರೈತರಿಗೆ ನಿರಾಶೆಯಾಗಿತ್ತು. ಈ ಕುರಿತು ಮಾಹಿತಿ ಸಂಗ್ರಹಿಸಿದ ಶಾಸಕ ಅಶೋಕ್ ಕುಮಾರ್ ರೈ ಬೆಂಗಳೂರಿನಲ್ಲಿ ತೋಟಗಾರಿಕಾ ಸಚಿವ ಎಮ್ ಕೆ ಮಲ್ಲಿಕಾರ್ಜುನ ಅವರನ್ನು ಭೇಟಿಯಾಗಿ ಅಡಿಕೆ ಮತ್ತು ಕಾಳುಮೆಣಸನ್ನು ಪ್ರಧಾನಿ ಫಸಲು ಭಿಮಾ ಯೋಜನೆಗೆ ಸೇರ್ಪಡೆಗೊಳಿಸುವಂತೆ ಮನವಿ ಮಾಡಿದ್ದರು.
ಜೂ.28 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೋಟಗಾರಿಕಾ ಸಚಿವರು ಇದಕ್ಕೆ ಅಂಗೀಕಾರ ಪಡೆದಿದ್ದು ಒಂದೆರಡು ದಿನಗಳ ಒಳಗಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ಇದನ್ನು ಘೋಷಣೆ ಮಾಡಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅವರ ಪ್ರಯತ್ನಕ್ಕೆ ಜಿಲ್ಲೆಯ ಕೃಷಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.