ಮಂಗಳೂರು(ವಾಷಿಂಗ್ಟನ್): ಆನ್ಲೈನ್ ಹರಾಜಿನಲ್ಲಿ ಉಪ್ಪಿನ ಕಣಕ್ಕಿಂತ ಆಕಾರದಲ್ಲಿ ಚಿಕ್ಕದಾಗಿರುವ ಹ್ಯಾಂಡ್ ಬ್ಯಾಗ್ ವೊಂದನ್ನು 63,000 ಡಾಲರ್ ಗೆ (ಅಂದಾಜು ಭಾರತೀಯ ಮೌಲ್ಯ 51.6 ಲಕ್ಷ ರೂಪಾಯಿ) ಮಾರಾಟ ಮಾಡಲಾಗಿದೆ. ಈ ಹ್ಯಾಂಡ್ ಬ್ಯಾಗ್ ಗಾತ್ರದಲ್ಲಿ ಉಪ್ಪಿನ ಕಣಕ್ಕಿಂತ ಚಿಕ್ಕದಾಗಿದ್ದು ಹಳದಿ ಮತ್ತು ಹಸಿರು ಬಣ್ಣವನ್ನು ಹೊಂದಿದೆ.
ಇದೊಂದು ಮೈಕ್ರೋಸ್ಕೋಪಿಕ್ ಬ್ಯಾಗ್ ಆಗಿದ್ದು, ಜನಪ್ರಿಯ ಲೂಯಿ ವಿಟಾನ್ ವಿನ್ಯಾಸವನ್ನು ಆಧರಿಸಿದೆ. ಈ ಹ್ಯಾಂಡ್ ಬ್ಯಾಗನ್ನು ನ್ಯೂಯಾರ್ಕ್ ಆರ್ಟ್ ಕಲೆಕ್ಟಿವ್ ಸಂಸ್ಥೆ ಮೆರಿಲ್ಯಾಂಡ್ ಸಿನಿಯರ್ ಸಿಟಿಝನ್ಸ್ ಹಾಲ್ ಆಫ್ ಫೇಮ್ ತಯಾರು ಮಾಡಿದ್ದು, ಕೇವಲ 0.003 ಇಂಚುಗಳಿಗಿಂತ ಕಡಿಮೆ ಅಗಲವನ್ನು ಹೊಂದಿದೆ. ಈ ತಿಂಗಳ ಆರಂಭದಲ್ಲಿ ಮೆರಿಲ್ಯಾಂಡ್ ಸಿನಿಯರ್ ಸಿಟಿಝನ್ಸ್ ಹಾಲ್ ಆಫ್ ಫೇಮ್ ಸಂಸ್ಥೆ ಇದರ ಫೋಟೋವನ್ನು ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಆನ್ಲೈನ್ ನಲ್ಲಿ ಬಾರಿ ಸಂಚಲನ ಮೂಡಿಸಿತ್ತು.
ಹ್ಯಾಂಡ್ ಬ್ಯಾಗ್ ಸೂಜಿಯ ಕಣ್ಣಿನ ಮೂಲಕ ಹಾದು ಹೋಗುವಷ್ಟು ಕಿರಿದಾಗಿದೆ ಮತ್ತು ಸಮುದ್ರದಲ್ಲಿ ಸಿಗುವ ಉಪ್ಪಿನ ಕಣಕ್ಕಿಂತ ಚಿಕ್ಕದಾಗಿದೆ ಎಂಬ ಶೀರ್ಷಿಕೆಯ ಜೊತೆಗೆ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿತ್ತು. ತ್ರೀಡಿ ಪ್ರಿಂಟ್ ಮೈಕ್ರೋ-ಸ್ಕೇಲ್ ಪ್ಲಾಸ್ಟಿಕ್ ಭಾಗಗಳಿಗೆ ಬಳಸಲಾಗುವ ಫೋಟೋಪಾಲಿಮರನ್ನು ಬಳಸಿ ಇದನ್ನು ತಯಾರಿಸಲಾಗಿದೆ. ಈ ಹ್ಯಾಂಡ್ ಬ್ಯಾಗ್ ಅನ್ನು ಡಿಜಿಟಲ್ ಡಿಸ್ ಪ್ಲೇ ಹೊಂದಿರುವ ಮೈಕ್ರೋಸ್ಕೋಪ್ ಜತೆಗೆ ಖರೀದಿದಾರರಿಗೆ ಮಾರಾಟ ಮಾಡಲಾಯಿತು. ಡಿಜಿಟಲ್ ಮೈಕ್ರೋಸ್ಕೋಪ್ ಸಹಾಯದಿಂದ ಖರೀದಿದಾರರು ಈ ಹ್ಯಾಂಡ್ ಬ್ಯಾಗನ್ನು ನೋಡಬಹುದು.