ಮಂಗಳೂರು : ಭಾರತದ ಚಂದ್ರಯಾನ-3 ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಇಸ್ರೋ ಸೂರ್ಯನ ಅಧ್ಯಯನ ನಡೆಸಲು ನೌಕೆಯನ್ನು ಕಳುಹಿಸಿದೆ. ಇತ್ತ ಭಾರತೀಯ ವಿಜ್ಞಾನಿಗಳು ಸಮುದ್ರದ ಅಡಿಯಲ್ಲಿ ಲೋಹ, ಖನಿಜ ಹುಡುಕಾಟಕ್ಕೆ ಮುಂದಾಗಿದ್ದಾರೆ.
ಸಮುದ್ರಯಾನ ಯೋಜನೆಯಡಿ ಅಮೂಲ್ಯ ಲೋಹ, ಖನಿಜಗಳ ಹುಡುಕಾಟ ನಡೆಯಲಿದೆ. ಸ್ಥಳೀಯವಾಗಿ ತಯಾರಿಸಿದ ಸಬ್ ಮರ್ಸಿಬಲ್ ನಲ್ಲಿ ಮೂರು ಜನರನ್ನು 6,000 ಮೀಟರ್ ನೀರಿನ ಅಡಿಗೆ ಕಳುಹಿಸಿ ಕೋಬಾಲ್ಟ್, ನಿಕಲ್ ಮತ್ತು ಮ್ಯಾಂಗನೀಸ್ ಮುಂತಾದ ಖನಿಜಗಳನ್ನು ಅನ್ವೇಷಿಸಲು ತಯಾರಿ ನಡೆಸಲಾಗುತ್ತಿದೆ. ಸುಮಾರು ಎರಡು ವರ್ಷಗಳ ಕಾಲ ತಯಾರಾದ ಮತ್ಸ್ಯ 6000 ಸಬ್ ಮರ್ಸಿಬಲ್ 2024ರ ಆರಂಭದಲ್ಲಿ ಚೆನ್ನೈ ಕರಾವಳಿಯ ಬಂಗಾಳಕೊಲ್ಲಿಯಲ್ಲಿ ಸಮುದ್ರದ ಆಳಕ್ಕೆ ಇಳಿಯಲಿದೆ. ನ್ಯಾಶನಲ್ ಇಸ್ಟಿಟ್ಯೂಟ್ ಆಫ್ ಓಶನ್ ಟೆಕ್ನಾಲಜಿಯ ವಿಜ್ಞಾನಿಗಳು ಮತ್ಸ್ಯ 6000 ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ವಿನ್ಯಾಸ, ಸಾಮಗ್ರಿ, ಕಾರ್ಯವಿಧಾನಗಳನ್ನು ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ. ಡೀಪ್ ಓಶನ್ ಮಿಷನ್ ನ ಭಾಗವಾಗಿ ಸಮುದ್ರಯಾನ ಮಿಷನ್ ನಡೆಯುತ್ತಿದೆ. 2024ರ ಮೊದಲ ತ್ರೈ ಮಾಸಿಕದಲ್ಲಿ 500 ಮೀಟರ್ ಆಳದ ಸಮುದ್ರದಲ್ಲಿ ಪ್ರಯೋಗ ನಡೆಸುತ್ತೇವೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರವಿಚಂದ್ರನ್ ಹೇಳಿದ್ದಾರೆ.
ಮಿಷನ್ 2026ರ ವೇಳೆಗೆ ಸಾಕಾರಗೊಳ್ಳುವ ನಿರೀಕ್ಷೆ ಇದೆ. ಇದುವರೆಗೆ ಅಮೆರಿಕ, ರಷ್ಯಾ, ಜಪಾನ್, ಫ್ರಾನ್ಸ್ ಮತ್ತು ಚೀನಾ ಮಾತ್ರ ಮಾನವ ಸಹಿತ ಸಬ್ ಮರ್ಸಿಬಲ್ ಅಭಿವೃದ್ಧಿ ಪಡಿಸಿವೆ. ಮತ್ಸ್ಯ 6000ಕ್ಕಾಗಿ 2.1 ಮೀ. ವ್ಯಾಸದ ಗೋಳವನ್ನು ವಿನ್ಯಾಸಗೊಳಿಸಲಾಗಿದ್ದು, ಮೂವರನ್ನು ಹೊತ್ತೊಯ್ಯುವ ಶಕ್ತಿ ಹೊಂದಿದೆ. ವಾಹನ 12ರಿಂದ 16 ಗಂಟೆಗಳ ಕಾಲ ಕಾರ್ಯ ನಿರ್ವಹಿಸಬಹುದು. ಜೊತೆಗೆ 96 ಗಂಟೆಗಳ ಕಾಲ ಆಮ್ಲಜನಕ ಲಭ್ಯವಿರಲಿದೆ ಎಂದು ತಿಳಿದು ಬಂದಿದೆ.