ಮಂಗಳೂರು: 2018ರಲ್ಲಿ ಕೇರಳವನ್ನು ಬೆಚ್ಚಿ ಬೀಳಿಸಿದ್ದ ನಿಫಾ ವೈರಸ್ ಮತ್ತೊಮ್ಮೆ ಮಲೆಯಾಳಿಗರ ನಿದ್ದೆಗೆಡಿಸಿದೆ. ಕೇರಳದಲ್ಲಿ ಇಬ್ಬರು ಜ್ವರದಿಂದ ಸಾವನ್ನಪ್ಪಿದ್ದು, ಇದಕ್ಕೆ ನಿಫಾ ವೈರಸ್ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ.
ಕೋಝಿಕ್ಕೋಡ್ ಖಾಸಗಿ ಆಸ್ಪತ್ರೆಯಲ್ಲಿ ಸೆ.11ರಂದು ಜ್ವರ ಬಾಧಿಸಿದ ಇಬ್ಬರು ಮೃತಪಟ್ಟಿರುವುದರಿಂದ ಜಿಲ್ಲೆಯಾದ್ಯಂತ ಎಚ್ಚರಿಕೆ ನೀಡಲಾಗಿದೆ. ಈ ಸಾವಿಗೆ ನಿಫಾ ವೈರಸ್ ಕಾರಣ ಎನ್ನಲಾಗಿದ್ದು, ಮೃತರಲ್ಲಿ ಒಬ್ಬರ ಸಂಬಂಧಿಕರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ವೈದ್ಯಕೀಯ ಪರೀಕ್ಷೆಯ ಫಲಿತಾಂಶ ಇನ್ನಷ್ಟೇ ಬರಬೇಕಿದೆ. ನಿಫಾ ವೈರಸ್ ಬಾಧೆಯ ಭೀತಿಯ ಹಿನ್ನಲೆಯಲ್ಲಿ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.
ನಿಫಾ ವೈರಸ್ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ಬಾವಲಿಗಳು ಕಚ್ಚಿದ ಹಣ್ಣನ್ನು ತಿನ್ನುವುದರಿಂದ ಹರಡುತ್ತದೆ. 2018ರಲ್ಲಿ ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ನಿಫಾ ಹಬ್ಬಿತ್ತು. 2021ರಲ್ಲಿಯೂ ನಿಫಾ ವೈರಸ್ ಹರಡಿತ್ತು. ಈವರೆಗೂ ಈ ರೋಗಕ್ಕೆ ಔಷಧ ಕಂಡುಹಿಡಿದಿಲ್ಲ ಈ ವೈರಸ್ ಪತ್ತೆಯಾದರೆ ಶೇ. 74ರಷ್ಟು ಸಾವು ಖಚಿತ ಎನ್ನಲಾಗಿದೆ. ಹೀಗಾಗಿ ಭೀತಿ ಸೃಷ್ಟಿಯಾಗಿದೆ.