ಮಂಗಳೂರು: ನವರಾತ್ರಿ ಹಬ್ಬದ 3ನೇ ದಿನದಂದು ದುರ್ಗಾದೇವಿಯ 3ನೇ ರೂಪವಾದ ತಾಯಿ ಚಂದ್ರಘಂಟಾಳನ್ನು ಪೂಜಿಸಲಾಗುತ್ತದೆ. ದುರ್ಗಾದೇವಿಯ ಈ ಅವತಾರವನ್ನು ಪಾಪನಾಶಕಿ ಎಂದು ಕರೆಯಲಾಗುತ್ತದೆ. ಚಂದ್ರಘಂಟಾಳನ್ನು ಪೂಜಿಸುವುದರಿಂದ ಧೈರ್ಯ ಮತ್ತು ಸ್ಥೈರ್ಯವನ್ನು ಪಡೆದು ಕೊಳ್ಳಬಹುದು.
ತಾಯಿ ಚಂದ್ರಘಂಟಾದೇವಿ:
ಯುದ್ದಭಂಗಿಯಲ್ಲಿ ಸಿಂಹದ ಮೇಳೆ ಕುಳಿತಿರುವ ಚಂದ್ರಘಂಟಾಳು ಕೈಯ್ಯಲ್ಲಿ ಖಡ್ಗ, ತ್ರಿಶೂಲ, ಬಿಲ್ಲು ಮತ್ತು ಗದೆ ಹಿಡಿದಿದ್ದಾಳೆ. ಹಣೆಯ ಮೇಲೆ ಗಡಿಯಾರದ ಆಕಾರದಲ್ಲಿ ಚಂದ್ರನಿದ್ದಾನೆ. ಇದೇ ಕಾರಣಕ್ಕೆ ಚಂದ್ರಘಂಟಾ ಎಂದು ಕರೆಯಲಾಗುತ್ತದೆ. ಮಂಗಳಗ್ರಹದೊಂದಿಗೆ ಸಂಬಂಧ ಹೊಂದಿರುವ ಚಂದ್ರಘಂಟಾ ರಾಕ್ಷಸರನ್ನು ನಾಶ ಮಾಡಲು ಅವತರಿಸಿದಳು ಎನ್ನಲಾಗಿದೆ. ಮತ್ತು ಈಕೆಯಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಮೂರು ದೇವರುಗಳ ಶಕ್ತಿಯಿದೆ. ತಾಯಿ ಚಂದ್ರಘಂಟಾ ಪೂಜೆಯಲ್ಲಿ ಹೆಚ್ಚಾಗಿ ಕೆಂಪು ಮತ್ತು ಕಿತ್ತಳೆ ಬಣ್ಣಗಳನ್ನು ಬಳಸಲಾಗುತ್ತದೆ. ನವರಾತ್ರಿಯ ಮೂರನೇ ದಿನ ʼರಣ್ʼ ಅಕ್ಷರವನ್ನು ಪಠಿಸುವುದರಿಂದ ಮಂಗಳನ ಅಶುಭ ಪರಿಣಾಮಗಳು ಕಡಿಮೆಯಾಗುತ್ತದೆ. ಚಂದ್ರಘಂಟಾ ದೇವಿಗೆ ಕೆಂಪು ಚಂದನ, ಕೆಂಪು ಚುನ್ರಿ, ಕೆಂಪು ಹೂವು, ಕೆಂಪು ಹಣ್ಣು, ಹಾಲಿನಿಂದ ಮಾಡಿದ ಸಿಹಿಯನ್ನು ಅರ್ಪಿಸಿ ಆರತಿ ಬೆಳಗಿ ಪೂಜಿಸುವುದರಿಂದ ಧೈರ್ಯದ ಜೊತೆಗೆ ಸೌಮ್ಯತೆ ಮತ್ತು ವಿನಯವೂ ಹೆಚ್ಚುತ್ತದೆ ಎನ್ನಲಾಗಿದೆ.
ಚಂದ್ರಘಂಟಾ ದೇವಿ ಮಂತ್ರ
ʼಏಂ ಶ್ರೀಂ ಶಕ್ತಾಯೈ ನಮಃ
ಯಾ ದೇವಿ ಸರ್ವ ಭೂತೇಷು ಮಾಂ ಚಂದ್ರಘಂಟಾ ರೂಪೇಣ ಸಂಸ್ಥಿತಾ!
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃʼ!!
ಪಿಂಡಜಪ್ರವರಾರೂಢಾಣ್ಡಕೋಪಾಸ್ತ್ರಕೇರ್ಯುತಾ!
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ!!
ಚಂದ್ರಘಂಟಾ ದೇವಿಯ ಪೂಜಾಫಲ
ಚಂದ್ರಘಂಟಾ ದೇವಿಗೆ ಬಿಳಿಬಣ್ಣದ ಕಮಲದ ಹೂವುಗಳನ್ನು ಮತ್ತು ಹಳದಿ ಗುಲಾಬಿ ಹೂವುಗಳ ಹಾರವನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ದೇವಿಯ ಮುಂದೆ ಸಣ್ಣ ಕೆಂಪು ಬಟ್ಟೆಯಲ್ಲಿ ಲವಂಗ, ವೀಳ್ಯೆಲೆ ಮತ್ತು ಅಡಿಕೆಯನ್ನು ಹಾಕಿ ಪಾದಗಳಿಗೆ ಅರ್ಪಿಸಿ, ದೇವಿಯ ನವರ್ಣ ಮಂತ್ರವನ್ನು 108 ಬಾರಿ ಜಪಿಸಿ ಅದನ್ನು ಜತೆಯಲ್ಲಿ ಇಟ್ಟುಕೊಳ್ಳುವುದರಿಂದ ಆತ್ಮ ಸ್ಥೈರ್ಯ ಹೆಚ್ಚಿ ಶತ್ರುಗಳ ಪ್ರತಿ ನಡೆಯೂ ವಿಫಲವಾಗುತ್ತದೆ ಎಂದು ಹೇಳಲಾಗುತ್ತದೆ.ಚಂದ್ರಘಂಟಾ ದೇವಿಗೆ ಕೇಸರಿ ಖೀರ್ ಮತ್ತು ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ಅರ್ಪಿಸುವುದು ತುಂಬಾ ಪ್ರಯೋಜನಕಾರಿ.