ಪ್ರಾಣ ಬೆದರಿಕೆಗಳಿಗೆ ಅಂಜದ ಗಾಂಧೀಜಿ
ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಹೋರಾಟಗಳನ್ನು ಸಂಘಟಿಸಿದಾಗಲೂ ಅವರನ್ನು ಕೊಲ್ಲುವ ಬೆದರಿಕೆಗಳು ವ್ಯಕ್ತವಾಗಿದ್ದವು. ಅವರ ಮೇಲೆ ಹಲ್ಲೆಗಳೂ ನಡೆದಿದ್ದವು. ಗಾಂಧಿ ಯಾವುದಕ್ಕೂ ಜಗ್ಗಿದವರಲ್ಲ. ಭಾರತಕ್ಕೆ ಬಂದ ಮೇಲೂ ಅವರನ್ನು ಕೊಲ್ಲುವ ಹಲವಾರು ಪ್ರಯತ್ನಗಳು ನಡೆದವು.
ಹಿಂಸೆ ಮತ್ತು ಸೇಡಿನ ಮಾರ್ಗವನ್ನು ತೊರೆದು ಚಳುವಳಿಯನ್ನು ಮುನ್ನಡೆಸಬೇಕು ಎಂಬ ನಿಲುವು ಗಾಂಧಿಯವರದಾಗಿತ್ತು. ಆದರೆ ಕೆಲವು ಸಂಘಟನೆಗಳಿಗೆ ಈ ಮಾರ್ಗವು ಸರಿಬೀಳಲಿಲ್ಲ. ಹಿಂಸಾಚಾರ ಮತ್ತು ಪ್ರತ್ಯೇಕ ವ್ಯಕ್ತಿಗಳನ್ನು ಕೊಲ್ಲುವ ಇವರ ಮಾರ್ಗವನ್ನು ಗಾಂಧಿ ಇಂಗ್ಲೆಂಡಿನಿದ್ದಾಗಲೂ ವಿರೋಧಿಸಿದ್ದರು. ಸ್ವತಂತ್ರ ಭಾರತವು ಎಲ್ಲ ಕೋಮುಗಳು ಸಹಬಾಳ್ವೆ ನಡೆಸುವ ದೇಶವಾಗಬೇಕೆಂದು ಅವರು ಬಯಸಿದ್ದರು. ಅದಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧವಿರುವುದಾಗಿ ಹೇಳುತ್ತಿದ್ದರು.