ಮಂಗಳೂರು (ಬೆಂಗಳೂರು): ಜನರ ಅನುಕೂಲಕ್ಕಾಗಿ ಈ ವರ್ಷ ಹೆಚ್ಚುವರಿಯಾಗಿ 188 ಇಂದಿರಾ ಕ್ಯಾಂಟೀನ್ ಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಶಾಸಕರ ಭವನ ಆವರಣದಲ್ಲಿ ಸಂತ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಇಂದಿರಾ ಕ್ಯಾಂಟೀನ್ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಬಗ್ಗೆ ಉತ್ತರಿಸಿ, ಬೆಂಗಳೂರಿನ 225 ವಾರ್ಡ್ ಗಳಲ್ಲಿಯೂ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗುವುದು. ಇದಲ್ಲದೇ ಅಗತ್ಯವಿರುವೆಡೆ ಕ್ಯಾಂಟೀನ್ ಪ್ರಾರಂಭಿಸಲಾಗುವುದು. ಇಂದಿರಾ ಕ್ಯಾಂಟೀನ್ ಗೆ ಸ್ಥಳದ ಅಭಾವವಿರುವ ಕಡೆ ಮೊಬೈಲ್ ಕ್ಯಾಂಟೀನ್ ಗಳನ್ನು ಸ್ಥಾಪಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನಾಡಿನ ಎಲ್ಲ ಜನತೆಗೆ ಕನಕದಾಸ ಜಯಂತಿಯ ಶುಭಾಶಯಗಳನ್ನು ಕೋರಿದರು. ಶಾಸಕ ಬಿ.ಆರ್.ಪಾಟೀಲ್ ಅವರನ್ನು ಮುಖ್ಯಮಂತ್ರಿಗಳು ಭೇಟಿಯಾಗಿರುವ ಬಗ್ಗೆ ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಬಿ.ಆರ್.ಪಾಟೀಲ್ ಅವರೊಂದಿಗೆ ಚರ್ಚಿಸಲಾಗಿದೆ, ಅಧಿವೇಶನಕ್ಕೆ ಆಗಮಿಸಲು ಮನವೊಲಿಸಿರುವುದಾಗಿ ತಿಳಿಸಿದರು. ನಿಮಾನ್ಸ್ ನಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸಾ ವ್ಯವಸ್ಥೆಯಿಲ್ಲದೇ ರೋಗಿಯೊಬ್ಬರ ಸಾವು ಸಂಭವಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ನಿಮಾನ್ಸ್ ನಿರ್ದೇಶಕರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.