ಮಂಗಳೂರು (ಕೊಣಾಜೆ): ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳ ಕಡವಿನಬಳಿ ಸಮೀಪದ ನೇತ್ರಾವತಿ ನದಿಯಲ್ಲಿ ತಾಯಿ ಹಾಗೂ ಒಂದು ವರ್ಷದ ಮಗುವಿನ ಮೃತದೇಹ ಮಾ.29ರಂದು ರಾತ್ರಿ ಪತ್ತೆಯಾಗಿದೆ. ತಾಯಿಯು ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ.
ಮೃತ ಮಹಿಳೆಯನ್ನು ನಾಗರಾಜ್ ಎಂಬವರ ಪತ್ನಿ ಚೈತ್ರಾ(30 ವ) ಎಂದು ಗುರುತಿಸಲಾಗಿದೆ. ಅಡ್ಯಾರ್ ನಿವಾಸಿಯಾಗಿರುವ ಇವರು ತನ್ನ ಒಂದು ವರ್ಷದ ಮಗು ದಿಯಾಂಶ್ ಜತೆ ಮಧ್ಯಾಹ್ನ ಸೇತುವೆಯ ಮೂಲಕ ನಡೆದುಕೊಂಡು ಹರೇಕಳ ಕಡವಿನ ಬಳಿ ಬಂದಿದ್ದರು ಎನ್ನಲಾಗಿದೆ. ನದಿಯ ಸಮೀಪ ನಡೆದುಕೊಂಡು ಹೋಗುವುದನ್ನು ಸ್ಥಳೀಯರು ಗಮನಿಸಿದ್ದರು. ಶುಕ್ರವಾರ ಮಧ್ಯಾಹ್ನದ ಬಳಿಕ ಆಕೆ ಮಗುವಿನೊಂದಿಗೆ ಕಾಣೆಯಾಗಿದ್ದು, ಮನೆಯವರು ಹುಡುಕಾಟ ಆರಂಭಿಸಿದ್ದರು. ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ರಾತ್ರಿ 8.30 ರ ವೇಳೆಗೆ ಹರೇಕಳ ನೇತ್ರಾವತಿ ನದಿಯಲ್ಲಿ ತಾಯಿ ಮಗುವಿನ ಶವ ಪತ್ತೆಯಾಗಿದೆ. ಮಹಿಳೆಯು ಮಗುವನ್ನು ಎದೆಗೆ ಕಟ್ಟಿಕೊಂಡು ಆತ್ಮಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕೊಣಾಜೆ ಪೊಲೀಸ್ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.