ದ.ಕ ಲೋಕಸಭಾ ಚುನಾವಣೆ ಹಿನ್ನೋಟ-1951 ರಿಂದ 2019(ಭಾಗ-1/2)

ಭಾರತ ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ನಿಜವಾದ ಹಾಗೂ ಪರಮೋನ್ನೊತ ಪ್ರಭುಗಳು. ಮಹಾ ಚುನಾವಣೆ ಪ್ರಜಾಪ್ರಭುತ್ವ ವ್ಯವಸ್ಥೆಯ ಹಬ್ಬ, ಮತದಾನ ದೇಶದ ಜನತೆಯ ಶಕ್ತಿ ಔನ್ನತ್ಯಗಳ ಹಾಗೂ ಪರಮ ಪ್ರಭುತ್ವದ ಸಂಕೇತ. ದೇಶ ಸ್ವಾತಂತ್ರ್ಯ ಪಡೆದು 4 ವರ್ಷಗಳ ಬಳಿಕ 1951-52ರಲ್ಲಿ ಪ್ರಥಮ ಮಹಾ ಚುನಾವಣೆ ನಡೆದಿತ್ತು. ಕಳೆದ ಏಳು ದಶಕಗಳಿಂದ ಸಾರ್ವತ್ರಿಕ ಚುನಾವಣೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಭದ್ರ ನೆಲೆ ಕಂಡಿದೆ. 1951 ರಿಂದ 2019ರ ವರೆಗಿನ ದ.ಕ ಲೋಕಸಭಾ ಚುನಾವಣಾ ಮಾಹಿತಿ ಇಲ್ಲಿದೆ.

1951ರಿಂದ ಸತತ 9 ಬಾರಿ ಕಾಂಗ್ರೆಸ್… 1991ರಿಂದ ಸತತ 8 ಬಾರಿ ಬಿಜೆಪಿ… ಇದು ಮಂಗಳೂರು (ಪ್ರಸ್ತುತ ದ.ಕ.) ಲೋಕಸಭಾ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಸಾಧನೆ. ಕಳೆದ 16 ಚುನಾವಣೆಗಳಲ್ಲಿ ಕಾಂಗ್ರೆಸ್, ಬಿಜೆಪಿ ಹೊರತಾಗಿ ಅನ್ಯ ಪಕ್ಷಗಳಿಗೆ ಈ ಕ್ಷೇತ್ರದಿಂದ ಆಯ್ಕೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಮತ್ತು ಬಿಜೆಪಿಯ ವಿ. ಧನಂಜಯ ಕುಮಾರ್ ಸತತ 4 ಬಾರಿ ಗೆಲುವು ಸಾಧಿಸುವ ಮೂಲಕ ಮಂಗಳೂರು ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಇವರಿಬ್ಬರು ಕೇಂದ್ರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2009ರ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಈ ಕ್ಷೇತ್ರದಿಂದ ಗೆದ್ದ ಬಿಜೆಪಿಯ ನಳಿನ್‌ಕುಮಾರ್ ಕಟೀಲ್ ಬಳಿಕ ಹ್ಯಾಟ್ರಿಕ್ ಜಯ ಸಾಧಿಸಿದರು.

ಪ್ರಥಮ ಚುನಾವಣೆ
1951ರಲ್ಲಿ ಪ್ರಥಮ ಚುನಾವಣೆ ಎಂದು ದಾಖಲೆಯಲ್ಲಿದೆ. ಕಾರಣ 1951ರಲ್ಲಿ ಆರಂಭವಾದ ಚುನಾವಣಾ ಪ್ರಕ್ರಿಯೆ 1952ರಲ್ಲಿ ಮತ ಎಣಿಕೆ ನಡೆದು ಪೂರ್ಣಗೊಂಡಿತ್ತು. ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆದಿತ್ತು. ಆಗ ಭಾಷಾವಾರು ಪ್ರಾಂತ್ಯಗಳ ರಚನೆಯಾಗಿರಲಿಲ್ಲ. ಮದ್ರಾಸ್, ಮೈಸೂರು ಹಾಗೂ ಕೊಡಗಿನಲ್ಲಿ ಪ್ರತ್ಯೇಕವಾಗಿ ಲೋಕಸಭೆ ಚುನಾವಣೆ ನಡೆದಿತ್ತು. ದಕ್ಷಿಣ ಕನ್ನಡ ಜಿಲ್ಲೆ ಆಗ ಮದ್ರಾಸ್ ಪ್ರಾಂತ್ಯದ ಒಂದು ಭಾಗವಾಗಿತ್ತು. ಸೌತ್ ಕೆನರಾ (ನಾರ್ತ್), ಸೌತ್ ಕೆನರಾ (ಸೌತ್) ಸೇರಿದಂತೆ ಒಟ್ಟು 62 ಕ್ಷೇತ್ರಗಳು ಮದ್ರಾಸ್ ವ್ಯಾಪ್ತಿಯಲ್ಲಿದ್ದವು. ಮೈಸೂರು ಪ್ರಾಂತ್ಯದಲ್ಲಿ 9 ಹಾಗೂ ಕೂರ್ಗ್ ಏಕೈಕ ಕ್ಷೇತ್ರವಾಗಿತ್ತು.

ಸೌತ್‌ ಕೆನರಾ(ಸೌತ್)
1951ರಲ್ಲಿ ಸೌತ್ ಕೆನರಾ (ಸೌತ್) ಕ್ಷೇತ್ರಕ್ಕೆ ನಡೆದ ಪ್ರಥಮ ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಾರ್ಮಿಕ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ ಪತ್ರಕರ್ತ ಬೆನೆಗಲ್ ಶಿವರಾವ್ ರಾವ್ ಸೌತ್ ಕೆನರಾ (ಸೌತ್) ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಾಗೂ ಶಿವರಾಮ ಕಾರಂತರ ಸಹೋದರ ಕೆ. ರಾಮಕೃಷ್ಣ ಕಾರಂತರು ಕಿಸಾನ್ ಮಜೂರ್ ಪ್ರಜಾ ಪಾರ್ಟಿ (ಕೆಎಂಪಿಪಿ)ಯ ಅಭ್ಯರ್ಥಿಯಾಗಿದ್ದರು. ಆರ್.ಎಸ್. ಶರ್ಮ ಪಕ್ಷೇತರ ಅಭ್ಯರ್ಥಿಯಾಗಿದ್ದರು. 96, 619 ಮತ ಗಳಿಸಿದ ಬಿ. ಶಿವರಾವ್ ಅವರು 8,841 ಮತಗಳ ಅಂತರದ ಜಯ ಸಾಧಿಸಿದರು. ಕೆ. ರಾಮಕೃಷ್ಣ ಕಾರಂತರು 87,778 ಮತ ಗಳಿಸಿದ್ದರು. ಶಿವರಾಮ ಕಾರಂತರು ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕೆಎಂಪಿಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು.

ಮಂಗಳೂರು ಕ್ಷೇತ್ರ
1957ರ ಚುನಾವಣೆಯಲ್ಲಿ ಕೊಡಗು ಜಿಲ್ಲೆ ಒಳಗೊಂಡ ಮಂಗಳೂರು ಕ್ಷೇತ್ರ ಉದಯವಾಯಿತು. ಮಂಗಳೂರು ಕ್ಷೇತ್ರಕ್ಕೆ ನಡೆದ ಪ್ರಥಮ ಚುನಾವಣೆಯಲ್ಲೂ ಸ್ವಾತಂತ್ರ್ಯ ಹೋರಾಟಗಾರ, ಕಾಂಗ್ರೆಸ್ ಕಟ್ಟಾಳು ಕೆ. ರಾಮಚಂದ್ರ ಆಚಾರ್ಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 143599 ಮತ ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದರು. ಮಂಗಳೂರು ಕ್ಷೇತ್ರದ ಪ್ರಥಮ ಸಂಸದರಾದರು. ಸಿಪಿಐ ಅಭ್ಯರ್ಥಿ ಕೃಷ್ಣ ಶೆಟ್ಟಿ ಎ. 85373 ಮತ ಪಡೆದರು.

ಹ್ಯಾಟ್ರಿಕ್ ಜಯ
1962ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೆ.ಆರ್. ಆಚಾರ್ ಬದಲು ಕಾಂಗ್ರೆಸ್ ನ್ಯಾಯವಾದಿ ಎ. ಶಂಕರ ಆಳ್ವರನ್ನು ಕಣಕ್ಕಿಳಿಸಿತು. ಸ್ವತಂತ್ರ, ಸಿಪಿಐ, ಜನಸಂಘ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದರು. ಕಾಂಗ್ರೆಸ್ ಮತ್ತೆ ಜಯ ಸಾಧಿಸಿತು. ಅಲ್ಲಿಗೆ ಕಾಂಗ್ರೆಸ್ ಹ್ಯಾಟ್ರಿಕ್ ಜಯ ಸಾಧಿಸಿದಂತಾಯಿತು. ಈ ಚುನಾವಣೆಯಲ್ಲಿ ಪರಾಭವಗೊಂಡ ಸಿಪಿಐನ ಬಿ.ವಿ. ಕಕ್ಕಿಲಾಯರು ಬಳಿಕ ಬಂಟ್ವಾಳ ಮತ್ತು ವಿಟ್ಲ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದರು. ಸ್ವತಂತ್ರ ಪಕ್ಷದ ಜೆ.ಎಂ. ಲೋಬೊ ಪ್ರಭು ಉಡುಪಿ ಕ್ಷೇತ್ರದ ಸಂಸದರಾಗಿ ಚುನಾಯಿತರಾದರು.

ಕೊಡಗಿನ ಸಿಎಂ ಸಂಸದರಾದರು

  • ಮೈಸೂರು ರಾಜ್ಯದಲ್ಲಿ 1967ರ ಚುನಾವಣೆ ವೇಳೆಗೆ 27 ಕ್ಷೇತ್ರಗಳಿದ್ದವು. ಕೊಡಗು ಜಿಲ್ಲೆ ಪೂರ್ತಿಯಾಗಿ ಮಂಗಳೂರು ಕ್ಷೇತ್ರದಲ್ಲಿತ್ತು. ಮೊದಲ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಿತ್ತು. 1967 ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಥಮ ಬಾರಿಗೆ ಕೊಡಗಿನ ಸಿ.ಎಂ. ಪೂಣಚ್ಚರನ್ನು ಕಣಕ್ಕಿಳಿತು.
  • ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಸಿ.ಎಂ. ಪೂಣಚ್ಚ ಕಾಂಗ್ರೆಸ್ ಕಟ್ಟಾಳು. ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಜೈಲು ವಾಸ ಅನುಭವಿಸಿದವರು. 1947ರಲ್ಲಿ ಕೊಡಗು ಪ್ರತ್ಯೇಕ ರಾಜ್ಯವಾಗಿತ್ತು. ಕೊಡಗು ರಾಜ್ಯದ ವಿಧಾನಸಭೆ ನಡೆದ ಪ್ರಥಮ ಚುನಾವಣೆಯಲ್ಲಿ ಗೆದ್ದ ಪೂಣಚ್ಚ 1952ರಿಂದ 56ರವರೆಗೆ ಕೊಡಗಿನ ಮುಖ್ಯಮಂತ್ರಿಯಾಗಿದ್ದರು. ಭಾಷಾವಾರು ಪ್ರಾಂತ್ಯ ರಚನೆಯಾದಾಗ ಮೈಸೂರು ರಾಜ್ಯದಲ್ಲಿ ಕೊಡಗು ವಿಲೀನವಾಯಿತು.
  • 67ರ ಚುನಾವಣೆಯಲ್ಲಿ ಪೂಣಚ್ಚರಿಗೆ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ. ಮೂವರು ಪಕ್ಷೇತರರು ಸೇರಿದಂತೆ ಐದು ಮಂದಿ ಕಣದಲ್ಲಿದ್ದರು. ಕೊಡಗಿನ ಮಾಜಿ ಮುಖ್ಯಮಂತ್ರಿ ಪೂಣಚ್ಚ ಅವರು 1.25 ಲಕ್ಷ ಮತ ಗಳಿಸಿ ಮಂಗಳೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. 51ರ ಚುನಾವಣೆಯಲ್ಲಿ ಕಿಸಾನ್ ಮಜೂರ್ ಪ್ರಜಾ ಪಾರ್ಟಿಯಿಂದ ಸ್ಪರ್ಧಿಸಿದ್ದ ಕೆ.ಆರ್. ಕಾರಂತ್ ಪಕ್ಷೇತರರಾಗಿ ಸ್ಪರ್ಧಿಸಿ 96 ಸಾವಿರ ಮತ ಗಳಿಸುವ ಮೂಲಕ ದ್ವಿತೀಯ ಸ್ಥಾನ ಪಡೆದರು. ಸಿಪಿಎಂನ ಬಿ.ಎನ್.ಕುಟ್ಟಪ್ಪ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ವಿಧಾನ ಪರಿಷತ್‌ ನಿಂದ ಸಂಸತ್‌ ಗೆ

  • 1951ರ ಬಳಿಕ ನಡೆದ 5 ಚುನಾವಣೆಗಳಲ್ಲಿ ಕಾಂಗ್ರೆಸ್ ಸತತ ಜಯ ದಾಖಲಿಸಿದರೂ, ಪ್ರತಿ ಬಾರಿ ಅಭ್ಯರ್ಥಿ ಬದಲಾವಣೆ ಮಾಡಿದ್ದು ವಿಶೇಷ ಒಮ್ಮೆ ಗೆದ್ದವರು ಮತ್ತೆ ಅವಕಾಶ ಪಡೆಯಲೇ ಇಲ್ಲ. 1971ರಲ್ಲಿ ಲೋಕಸಭೆಗೆ ಚುನಾವಣೆ ಘೋಷಣೆಯಾದಾಗ ಕಾಂಗ್ರೆಸ್ ಇಬ್ಬಾಗವಾಗಿತ್ತು. ಇಂದಿರಾ ಗಾಂಧಿ ನೇತೃತ್ವದ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಹಸುಕರು ಚಿಹ್ನೆ ಪಡೆದರೆ, ಸಂಸ್ಥಾ ಕಾಂಗ್ರೆಸ್ (ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಅರ್ಗನೈಸೇಶನ್) ಜೋಡೆತ್ತು ಚಿಹ್ನೆ ಹೊಂದಿತ್ತು. ಸಿ.ಎಂ. ಪೂಣಚ್ಚ ಸಂಸ್ಥಾ ಕಾಂಗ್ರೆಸ್‌ನಲ್ಲಿ ಉಳಿದ ಕಾರಣ ಮಂಗಳೂರಿನ ಕೆ.ಕೆ. ಶೆಟ್ಟಿ ಅವರು ಇಂದಿರಾ ನೇತೃತ್ವದ ಕಾಂಗ್ರೆಸ್ ಅಭ್ಯರ್ಥಿಯಾದರು.
  • ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಕೆ.ಕೆ. ಶೆಟ್ಟಿ 1956ರಿಂದ ಎರಡು ಬಾರಿ ಮೈಸೂರು ವಿಧಾನಪರಿಷತ್ಗೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಮಾಜಿ ಸಂಸದ ಸಿ.ಎಂ. ಪೂಣಚ್ಚ ಸಂಸ್ಥಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಸಿಪಿಎಂ ಪ್ರಜಾ ಸೋಶಲಿಸ್ಟ್, ಸಿಪಿಎಂ ಹಾಗೂ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರು. ಕರಾವಳಿಯಲ್ಲಿ ಇಂದಿರಾ ಗಾಂಧಿ ಅವರ ಪ್ರಭಾವ ಜೋರಾಗಿತ್ತು. ಕೆ.ಕೆ. ಶೆಟ್ಟಿ 2 ಲಕ್ಷಕ್ಕೂ ಅಧಿಕ ಮತ ಗಳಿಸಿ ಲೋಕಸಭೆ ಪ್ರವೇಶಿಸಿದರು.

ಸತತ 4 ಬಾರಿ ಗೆದ್ದ ಬಿ.ಜನಾರ್ದನ ಪೂಜಾರಿ
1977ರ ಚುನಾವಣೆ ವೇಳೆಗೆ ದೇಶದಲ್ಲಿ ಬದಲಾವಣೆ ಗಾಳಿ ಬೀಸಿತ್ತು. ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ವಿರುದ್ಧ ಜನತೆಗೆ ಆಕ್ರೋಶವಿತ್ತು. ಮಂಗಳೂರು ಕ್ಷೇತ್ರದಲ್ಲಿ ಮತ್ತೆ ಅಭ್ಯರ್ಥಿ ಬದಲಾವಣೆ. ಈ ಬಾರಿ ಕಾಂಗ್ರೆಸ್ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲು ಯೋಚಿಸಿತು. 40 ಹರೆಯದ ಯುವ ನ್ಯಾಯವಾದಿ ಬಿ.ಜನಾರ್ದನ ಪೂಜಾರಿ ಅಭ್ಯರ್ಥಿಯಾದರು.

ನೇರ ಸ್ಪರ್ಧೆ
ಕಾಂಗ್ರೆಸ್ ವಿರುದ್ಧ ಸಮರಕ್ಕೆ ರಾಷ್ಟ್ರ ಮಟ್ಟದಲ್ಲಿ 4 ಪಕ್ಷಗಳು ಒಗ್ಗೂಡಿ ಜನತಾ ಪಾರ್ಟಿ (ಭಾರತೀಯ ಲೋಕ ದಳ) ರಚನೆಯಾಗಿತ್ತು. ಕೊಡಗಿನ ನ್ಯಾಯವಾದಿ ಎ.ಕೆ. ಸುಬ್ಬಯ್ಯ ನೇಗಿಲು ಹೊತ್ತ ರೈತನ ಚಿಹ್ನೆಯಡಿ ಮಂಗಳೂರು ಕ್ಷೇತ್ರದ ಅಭ್ಯರ್ಥಿಯಾದರು. ಜನಾರ್ದನ ಪೂಜಾರಿ ಅವರಿಗೆ ಪ್ರಥಮ ಪರೀಕ್ಷೆ. ಇಬ್ಬರು ನ್ಯಾಯವಾದಿಗಳ ಮಧ್ಯೆ ನೇರ ಸ್ಪರ್ಧೆ, ಚುನಾವಣೆ ಫಲಿತಾಂಶ ಬಂದಾಗ ದೇಶದಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲು. ಆದರೆ ಕರ್ನಾಟಕದಲ್ಲಿ ಮಂಗಳೂರು ಸೇರಿದಂತೆ 26 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ. ಮಂಗಳೂರು ಕ್ಷೇತ್ರದಲ್ಲಿ 78 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ ಪೂಜಾರಿ ಅವರು ಪ್ರಥಮ ಬಾರಿಗೆ ಲೋಕಸಭೆ ಪ್ರವೇಶಿಸಿದರು.

ಕೈ ಚಿಹ್ನೆ ಬಂತು
1980ರ ಚುನಾವಣೆ. ಕಾಂಗ್ರೆಸ್ ಇಬ್ಬಾಗವಾದ ಪರಿಣಾಮ ಹಸುಕರು ಚಿಹ್ನೆ ಮಾಯವಾಗಿ ಇಂದಿರಾ ಕಾಂಗ್ರೆಸ್‌ಗೆ ಕೈ ಚಿಹ್ನೆ ಬಂದಿತ್ತು. ಪ್ರಥಮ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಮಾಡದೆ ಪೂಜಾರಿ ಅವರನ್ನೇ ಕಣಕ್ಕಿಳಿಸಿತು. ಜನತಾ ಪಾರ್ಟಿಯಿಂದ ಕರಂಬಳ್ಳಿ ಸಂಜೀವ ಶೆಟ್ಟಿ, ಅರಸ್ ಕಾಂಗ್ರೆಸ್‌ನಿಂದ ಬಿ.ಎ. ಮೊಯಿದ್ದೀನ್ ಅಖಾಡಕ್ಕಿಳಿದರು. ಐವರು ಪಕ್ಷೇತರರು ಸಹಿತ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದರು. ಮತದಾರ ಪೂಜಾರಿ ಅವರ ಕೈ ಬಿಡಲಿಲ್ಲ. 1.28 ಲಕ್ಷ ಮತಗಳ ದಾಖಲೆ ಅಂತರದ ಜಯ ದೊರೆಯಿತು.

ಪೂಜಾರಿ ಅವರ ಹ್ಯಾಟ್ರಿಕ್ ಜಯ
ಇಂದಿರಾ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಪೂಜಾರಿ ಕೇಂದ್ರ ಸಹಾಯಕ ವಿತ್ತ ಸಚಿವರಾಗಿ ಸಾಲಮೇಳದ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಿದರು. 84ರ ಚುನಾವಣೆ… ಜನತಾ ಪಾರ್ಟಿ ವಿಭಜನೆಯಾಗಿ ಬಿಜೆಪಿ ಉದಯವಾಗಿತ್ತು. ಪುತ್ತೂರಿನ ಶಾಸಕ ಕೆ.ರಾಮ ಭಟ್ ಬಿಜೆಪಿ ಅಭ್ಯರ್ಥಿಯಾದರು, ಕಣದಲ್ಲಿ ಓರ್ವ ಪಕ್ಷೇತರ. ತ್ರಿಕೋನ ಸ್ಪರ್ಧೆಯಲ್ಲಿ ಪೂಜಾರಿ ಅವರ ವಿಜಯಯಾತ್ರೆ ಮುಂದುವರಿಯಿತು. 1.19 ಲಕ್ಷ ಮತಗಳ ಅಂತರದಿಂದ ಗೆದ್ದು ರಾಜೀವ್ ಗಾಂಧಿ ಸರ್ಕಾರದಲ್ಲೂ ಸಚಿವರಾದರು.

ಸತತ 4ನೇ ಬಾರಿ ಸಂಸದ
1989ರ ಚುನಾವಣೆಯಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿದ ಬಿಜೆಪಿ ಮಾಜಿ ಶಾಸಕ ವಿ. ಧನಂಜಯಕುಮಾರ್‌ರಿಗೆ ಟಿಕೆಟ್ ನೀಡಿತು. ಜನತಾದಳದಿಂದ ಎಂ. ಮಹಮ್ಮದ್ ಹುಸೇನ್ ಕಣದಲ್ಲಿದ್ದರು. ಮತ್ತೆ ಕಣದಲ್ಲಿ ಐವರು ಪಕ್ಷೇತರರು ಸಹಿತ 9 ಅಭ್ಯರ್ಥಿಗಳು. ಆದರೆ ಪೂಜಾರಿ ಅವರ ನಾಗಾಲೋಟ ತಡೆಯಲು ಸಾಧ್ಯವಾಗಲಿಲ್ಲ. 91 ಸಾವಿರ ಮತಗಳ ಅಂತರದಿಂದ ಗೆದ್ದು 4ನೇ ಬಾರಿ ಸಂಸತ್ ಪ್ರವೇಶಿಸಿದರು.

ಬದಲಾದ ರಾಜಕೀಯ ಚಿತ್ರಣ
1951ರಿಂದ 1991… ನಾಲ್ಕು ದಶಕಗಳ ಕಾಲ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲೇ ಅಧಿಪತ್ಯ. ಸತತ 9 ಚುನಾವಣೆಗಳನ್ನು ಕಾಂಗ್ರೆಸ್ ಗೆದ್ದಿತ್ತು. ಇತರ ಪಕ್ಷಗಳು ಜಯದ ಹತ್ತಿರವೂ ಸುಳಿದಿರಲಿಲ್ಲ. ಆದರೆ 1991ರ ಚುನಾವಣೆಯಲ್ಲಿ ಕರಾವಳಿಯ ರಾಜಕೀಯ ಚಿತ್ರಣವೇ ಬದಲಾಯಿತು.

ಕೃಪೆ: ಪಿ ಬಿ ಹರೀಶ್‌ ರೈ

2ನೇ ಭಾಗದಲ್ಲಿ ಮುಂದುವರಿಯಲಿದೆ….

LEAVE A REPLY

Please enter your comment!
Please enter your name here