ಉತ್ತರ ಕನ್ನಡ ಜಿಲ್ಲೆ ಬನವಾಸಿ ದಾಸನಕೊಪ್ಪ ನಿವಾಸಿ ಅಬ್ದುಲ್​ ಶುಕ್ಕೂರ್ ಎನ್ಐಎ ವಶಕ್ಕೆ

ಮಂಗಳೂರು/ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ದಾಸನಕೊಪ್ಪದ ಮನೆಯೊಂದಕ್ಕೆ ಎನ್​ಐಎ ಅಧಿಕಾರಿಗಳು ಇಂದು (ಜೂ.18) ಬೆಳ್ಳಂ ಬೆಳಗ್ಗೆ ದಾಳಿ ಮಾಡಿದ್ದು ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಅಬ್ದುಲ್​ ಶುಕ್ಕೂರ್​ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದೆ. ಅಬ್ದುಲ್ ಶುಕ್ಕೂರ್ ದುಬೈನಲ್ಲಿ ಕೆಲಸ ಮಾಡುತ್ತಿದ್ದು ಬಕ್ರೀದ್​ ಹಬ್ಬ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿದ್ದರು.

ಅಬ್ದುಲ್ ಶುಕ್ಕೂರ್ ಆನ್​ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ಪಾಸ್ ಪೋರ್ಟ್​ಗೆ ನಕಲಿ ದಾಖಲೆಗಳನ್ನು ನೀಡಿದ ಬಗ್ಗೆ ಎನ್​​ಐಎ ಮಾಹಿತಿ ಪಡೆದುಕೊಂಡಿದೆ. ಅಬ್ದುಲ್ ಶುಕ್ಕೂರ್ ಕೂಡ ಭಾರತಕ್ಕೆ ಮರಳಿದ್ದು, ಸ್ವಗ್ರಾಮಕ್ಕೆ ಬಂದಿದ್ದ ವಿಚಾರವನ್ನು ತಿಳಿದು ಐವರು ಎನ್​ಐಎ ಅಧಿಕಾರಿಗಳು ಇಂದು (ಜೂ.18) ಬೆಳಿಗ್ಗೆ ಶಿರಸಿ ಡಿವೈಎಸ್ ಪಿ ಕಚೇರಿಗೆ ಬಂದಿದ್ದಾರೆ. ಇಲ್ಲಿ, ಅಬ್ದುಲ್ ಶುಕ್ಕೂರ್​ ಗ್ರಾಮಕ್ಕೆ ಬಂದಿರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ. ಇದೇ ವೇಳೆ, ಪಾಸ್ ಪೋರ್ಟ್​ಗೆ ನಕಲಿ ದಾಖಲೆ ನೀಡಿರುವ ಬಗ್ಗೆ ದೃಢವಾಗಿದೆ. ಬಳಿಕ ಶಿರಸಿ ಹಾಗೂ ಬನವಾಸಿ ಪೊಲೀಸರ ಸಹಕಾರದಿಂದ ದಾಳಿ ಮಾಡಿ, ವಶಕ್ಕೆ ಪಡೆದುಕೊಂಡಿದ್ದಾರೆ.

ಅಬ್ದುಲ್ ಶುಕ್ಕೂರ್ ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯನಾಗಿದ್ದು ಈತನ ವಿರುದ್ಧ ಭಯೋತ್ಪಾದನಾ ಚಟುವಟಿಕೆಗೆ ಪ್ರಚೋದನೆ ನೀಡಿರುವ ಆರೋಪ‌ ಕೇಳಿಬಂದಿದೆ. ಕಳೆದ ವರ್ಷ ಮಂಗಳೂರಿನಲ್ಲಿ ನಡೆದ ಕುಕ್ಕರ್​ ಬಾಂಬ್​ ಸ್ಫೋಟ, ಮಾರ್ಚ್​ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಅಬ್ದುಲ್​ ಶುಕ್ಕೂರ್​ ಭಾಗಿಯಾಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಬ್ದುಲ್ ಶುಕ್ಕೂರ್​ನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here