ಕೇಂದ್ರ, ‌ಎನ್‌ಟಿಎ ಗೆ ಸುಪ್ರೀಂಕೋರ್ಟ್ ನೋಟಿಸ್ – ನೀಟ್ ಅಕ್ರಮ ಸಂಪೂರ್ಣ ತನಿಖೆಗೆ ಸೂಚನೆ

ಮಂಗಳೂರು/ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಎನ್‌ಇಇಟಿ–ಯುಜಿ 2024ರ ಪರೀಕ್ಷೆಯನ್ನು ರದ್ದು ಮಾಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿ ಮಾಡಿದೆ.

ಅಂತಹ ಪರೀಕ್ಷೆಗಳ ತಯಾರಿಗಾಗಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಟ್ಟಿರುತ್ತಾರೆ. ಹಾಗಾಗಿ, ಪ್ರಕರಣ ಕುರಿತಂತೆ ಕೂಲಂಕುಷ ತನಿಖೆ ನಡೆಸಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಈ ಸಂಬಂಧ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಎಸ್‌.ವಿ.ಎನ್ ಭಟ್ಟಿ ಅವರನ್ನು ಒಳಗೊಂಡ ನ್ಯಾಯಪೀಠ ಕೇಂದ್ರ ಮತ್ತು ಎನ್‌ಟಿಎಗೆ ನೋಟಿಸ್ ಜಾರಿಮಾಡಿದೆ.

ಮೇ 5ರಂದು ನಡೆದಿದ್ದ ಎನ್‌ಇಇಟಿ–ಯುಜಿ 2024ರ ಪರೀಕ್ಷಾ ಫಲಿತಾಂಶ ಜೂನ್ 4ರಂದು ಪ್ರಕಟಗೊಂಡಿತ್ತು. ಪ್ರಕರಣವನ್ನು ಪ್ರತಿಕೂಲವೆಂದು ಪರಿಗಣಿಸಬಾರದು. ಪರೀಕ್ಷಾ ಪ್ರಕ್ರಿಯೆಯಲ್ಲಿ ಶೇಕಡ 0.001ರಷ್ಟು ನಿರ್ಲಕ್ಷ್ಯವಿದ್ದರೂ ಅದನ್ನು ಕೂಲಕಂಕಷವಾಗಿ ತನಿಖೆ ನಡೆಸಬೇಕುಎಂದು ನ್ಯಾಯಾಲಯವು ಕೇಂದ್ರ ಮತ್ತು ಎನ್‌ಟಿಎ ಪರ ವಕೀಲರಿಗೆ ಸೂಚಿಸಿದೆ. ಅಕ್ರಮದ ಮೂಲಕ ಉತ್ತೀರ್ಣನಾದ ವಿದ್ಯಾರ್ಥಿ ವೈದ್ಯನಾದರೆ, ಅವನು ಸಮಾಜಕ್ಕೆ ಎಷ್ಟು ಹಾನಿಮಾಡಬಹುದು ಎಂಬುದನ್ನು ಕಲ್ಪಿಸಿಕೊಳ್ಳಿ. ಅಂತಹ ಪರೀಕ್ಷೆಗಳ ತಯಾರಿಗಾಗಿ ವಿದ್ಯಾರ್ಥಿಗಳು ಎಷ್ಟು ಶ್ರಮಪಡುತ್ತಾರೆ ಎಂಬುದು ನಮಗೆ ತಿಳಿದಿದೆ. ನಾವು ಈ ಸಂಬಂಧ ಸಮಯೋಚಿತ ಕ್ರಮಗಳನ್ನು ಬಯಸುತ್ತೇವೆ ಎಂದು ಪೀಠ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜುಲೈ 8ಕ್ಕೆ ನಿಗದಿ ಮಾಡಿದ್ದು, ಪರೀಕ್ಷೆ ರದ್ದು ಮತ್ತು ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾಗಿರುವ ಇತರೆ ಅರ್ಜಿಗಳೂ ಅಂದು ವಿಚಾರಣೆಗೆ ಬರಲಿವೆ. ಈ ನಡುವೆ ಕೃಪಾಂಕ ಹಿಂಪಡೆದಿರುವ ಎನ್‌ಟಿಎ ಇದೇ 23ರಂದು 1563 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ನಿರ್ಧರಿಸಿದೆ.

LEAVE A REPLY

Please enter your comment!
Please enter your name here