ಮಂಗಳೂರು/ಬೆಂಗಳೂರು: ಕರ್ನಾಟಕ ವಿಧಾನ ಮಂಡಲದ ಮಳೆಗಾಲದ ಅಧಿವೇಶನ ಜುಲೈ 15 ರಿಂದ ನಡೆಯುವ ಸಾಧ್ಯತೆಗಳಿವೆ. ಜುಲೈ 15 ರಿಂದ 10 ದಿನ ಅಧಿವೇಶನ ನಡೆಸಲು ವಿಧಾನಸಭಾಧ್ಯಕ್ಷರ ಕಚೇರಿಯಲ್ಲಿ ಪೂರ್ವ ಸಿದ್ಧತೆಗಳು ನಡೆಯುತ್ತಿವೆ.
ಕೆಂಗಲ್ ಗೇಟ್ ನಿಂದ ವಿಧಾನಸಭೆ ಸಭಾಂಗಣ ಪ್ರವೇಶಿಸುವ ಮುಖ್ಯ ದ್ವಾರವನ್ನು ರೋಸ್ ವುಡ್‌ನಿಂದ ನಿರ್ಮಿಸಲಾಗಿದ್ದು, ಅಧಿವೇಶನದ ವೇಳೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ದ್ವಾರವನ್ನು ಉದ್ಘಾಟಿಸಲಿದ್ದಾರೆ. ಈ ಬಾರಿ ಒಳಾಂಗಣ ಮಾತ್ರವಲ್ಲದೆ, ಹೊರಾಂಗಣದ ಶುಚಿತ್ವ, ಶೋಭೆಗೆ ಒತ್ತು ನೀಡುವುದರೊಂದಿಗೆ ಮೊಗಸಾಲೆ ಮತ್ತು ಮೊಗಸಾಲೆ ಪ್ರವೇಶಿಸುವ ಪ್ರದೇಶದಲ್ಲಿ ರೆಡ್ ಕಾರ್ಪೆಟ್ ಹಾಕಲು ವ್ಯವಸ್ಥೆ ಮಾಡಲಾಗಿದೆ. ಸಮಯಕ್ಕೆ ಸರಿಯಾಗಿ ಹಾಜರಾಗುವವರು, ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರನ್ನು ಉತ್ತೇಜಿಸಲು ಈ ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಲಾಂಛನ ಎಂಬೋಜ್ ಮಾಡಿರುವ ಪ್ಲೇಟ್‌ಗಳನ್ನು ಕೊಡಲಾಗುತ್ತದೆ ಎಂದು ಹೇಳಲಾಗಿದೆ.