ಮಂಗಳೂರು/ದೆಹಲಿ: ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನಲೆಯಲ್ಲಿ ಈಗಾಗಲೇ ಪರೀಕ್ಷೆಯನ್ನು ರದ್ದು ಮಾಡಲಾಗಿದ್ದು ಪರೀಕ್ಷೆಯಲ್ಲಿ ನಡೆದ ಅಕ್ರಮದ ಬಗ್ಗೆ ತನಿಖೆ ನಡೆಯುತ್ತಿದೆ. ಈ ನಡುವೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ಕೇಂದ್ರ ಶಿಕ್ಷಣ ಸಚಿವಾಲಯ ಸಾರ್ವಜನಿಕ ಪರೀಕ್ಷೆಗಳ ಕಾಯಿದೆಯನ್ನು ಜಾರಿಗೆ ತರಲು ಅಧಿಸೂಚನೆ ಹೊರಡಿಸಿದೆ. 2024ಕ್ಕೆ ಅನುಗುಣವಾಗಿ ಈ ಕಾಯಿದೆಯನ್ನು ಜಾರಿ ಮಾಡಲಾಗಿದೆ. ಈ ಮೂಲಕ ದೇಶಾದ್ಯಂತ ನಡೆಯುವ ಸಾರ್ವಜನಿಕ ಪರೀಕ್ಷೆಗಳು ಮತ್ತು ಸಾಮಾನ್ಯ ಪ್ರವೇಶ ಪರೀಕ್ಷೆಗಳಲ್ಲಿ ನಡೆಯುವ ಅನ್ಯಾಯ ಹಾಗೂ ಅಕ್ರಮವನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಲಾಗಿದೆ.
2024 ಫೆಬ್ರವರಿಯಲ್ಲಿ ನಡೆದ ಸಂಸತ್ ಸಭೆಯಲ್ಲಿ ಈ ಕಾನೂನನ್ನು ಅಂಗೀಕರಿಸಲಾಗಿದ್ದು ಈ ಕಾನೂನಿನಲ್ಲಿ ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಪರೀಕ್ಷಾ ಪ್ರಾಧಿಕಾರ, ಸೇವಾ ಪೂರೈಕೆದಾರರು ಅಥವಾ ಯಾವುದೇ ಇತರ ಸಂಸ್ಥೆ ಸೇರಿದಂತೆ ಸಂಘಟಿತ ಅಪರಾಧವನ್ನು ಮಾಡಿದರೆ ಅವರಿಗೆ 5ರಿಂದ 10ವರ್ಷದ ವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಹಾಗೂ 1 ಕೋಟಿ ರೂ. ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ. ತರಬೇತಿ ಏಜೆಂಟ್ ಅಥವಾ ಕೋರ್ಸ್ ಸೆಂಟರ್ಗಳು ಪೇಪರ್ ಸೋರಿಕೆ ಅಪರಾಧದಲ್ಲಿ ಭಾಗಿಯಾಗಿರುವುದು ಕಂಡುಬಂದಲ್ಲಿ ಆ ಸಂಸ್ಥೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾನೂನು ನಿಬಂಧನೆಗಳನ್ನು ಹೊಂದಿದೆ ಹಾಗೂ ಪರೀಕ್ಷೆಯ ಪ್ರಮಾಣಾನುಗುಣವಾದ ವೆಚ್ಚವನ್ನು ಸಹ ಅದರಿಂದ ವಸೂಲಿ ಮಾಡಲಾಗುತ್ತದೆ ಎಂದು ಈ ಕಾನೂನಿನಲ್ಲಿ ತಿಳಿಸಲಾಗಿದೆ.
1.ಪ್ರಶ್ನೆ ಪತ್ರಿಕೆಗಳು ಅಥವಾ ಉತ್ತರ ಕೀಗಳನ್ನು ಸೋರಿಕೆ ಮಾಡುವುದು. 2. ಅನಧಿಕೃತ ಸಂವಹನದ ಮೂಲಕ ಅಭ್ಯರ್ಥಿಗಳಿಗೆ ಸಹಾಯ ಮಾಡುವುದು. 3.ಕಂಪ್ಯೂಟರ್ ನೆಟ್‌ವರ್ಕ್‌ಗಳು ಅಥವಾ ಸಂಪನ್ಮೂಲಗಳನ್ನು ತಿದ್ದುವುದು. 4. ನಕಲಿ ಪರೀಕ್ಷೆಗಳನ್ನು ನಡೆಸುವುದು ಅಥವಾ ನಕಲಿ ದಾಖಲೆಗಳನ್ನು ನೀಡುವುದು. 5. ಅರ್ಹತೆಗಾಗಿ ದಾಖಲೆಗಳನ್ನು ತಿದ್ದುವುದು ಈ ಕಾನೂನಿನ ಅಡಿಯಲ್ಲಿ ಅಪರಾಧವಾಗಿದೆ. ಜಾಮೀನು ರಹಿತ, ಹಾಗೂ ಉಪ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಸಹಾಯಕ ಪೊಲೀಸ್ ಆಯುಕ್ತರ ಶ್ರೇಣಿಯಲ್ಲಿ ಬರುವ ಯಾವುದೇ ಅಧಿಕಾರಿಯು ಕಾಯಿದೆಯ ಅಡಿಯಲ್ಲಿ ಈ ಅಪರಾಧವನ್ನು ತನಿಖೆ ಮಾಡಬಹುದು. ಇನ್ನು ಈ ಕಾನೂನು ಸ್ಪರ್ಧಾತ್ಮಕ ಪರೀಕ್ಷೆಗಳಾದ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್, ಸ್ಟಾಫ್ ಸೆಲೆಕ್ಷನ್ ಕಮಿಷನ್, ರೈಲ್ವೇಸ್, ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳು ಮತ್ತು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಎಲ್ಲಾ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ಒಳಗೊಂಡಿದೆ.