ಮಂಗಳೂರು/ಹಾಸನ: ಜೂನ್ 23 ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಹೋದರ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಹಾಸನದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೂ. 22ರಂದು ಸಂತ್ರಸ್ತ ನೀಡಿದ್ದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 377, 342, 506 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಡಿಜಿಪಿ ಕಚೇರಿಯಲ್ಲಿ ದೂರು ನೀಡಿದ್ದ ಸಂತ್ರಸ್ತ ಹಾಸನ ಎಸ್ಪಿಗೂ ದೂರಿನ ಪ್ರತಿಯನ್ನು ಮೇಲ್ ಮಾಡಿದ್ದರು.
ಸೂರಜ್ ರೇವಣ್ಣ ತಮ್ಮ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಅರಕಲಗೂಡು ಮೂಲದ ಜೆಡಿಎಸ್ ಕಾರ್ಯಕರ್ತರೊಬ್ಬರು ಶನಿವಾರ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಸೂರಜ್ ವಿರುದ್ಧ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ದೂರುದಾರ ತಮ್ಮನ್ನು ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಲು ರವಿವಾರ ಸೂರಜ್ ರೇವಣ್ಣ ಹಾಸನದ ಸೆನ್ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ವೇಳೆ ಪೊಲೀಸರು ಸೂರಜ್ ರೇವಣ್ಣ ಅವರನ್ನು ಮುಂಜಾನೆ 4 ಗಂಟೆಯವರೆಗೆ ವಿಚಾರಣೆ ನಡೆಸಿದ್ದು ಬಳಿಕ ಸೂರಜ್ ರೇವಣ್ಣನನ್ನು ಬಂಧಿಸಿದ್ದಾರೆ. ವಿಚಾರಣೆಗಾಗಿ ಸರ್ಕಾರ ಸಕಲೇಶಪುರ ಡಿವೈಎಸ್ಪಿಯನ್ನು ನೇಮಿಸಿದ್ದು ವಿಚಾರಣೆ ಬಳಿಕ ಸೂರಜ್ ರೇವಣ್ಣ ಅವರನ್ನು ತನಿಖಾಧಿಕಾರಿ ಪ್ರಮೋದ್ ಕುಮಾರ್ ಬಂಧಿಸಿದ್ದಾರೆ.
ಜೆಡಿಎಸ್ ಕಾರ್ಯಕರ್ತನಾಗಿರುವ ದೂರುದಾರ, ಡಾ.ಸೂರಜ್ ರೇವಣ್ಣಗೆ ಪರಿಚಿತರು. ನೌಕರಿ ಕೊಡಿಸುವಂತೆ ಕೋರಿ ಜೂ.16 ರಂದು ಸೂರಜ್ ರೇವಣ್ಣ ಅವರ ಗನ್ನಿಕಡ ಫಾರಂಹೌಸ್‌ಗೆ ತೆರಳಿದ್ದ ವೇಳೆ ತಮ್ಮ ಮೇಲೆ ಸೂರಜ್, ಅನೈಸರ್ಗಿಕ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ಮಧ್ಯೆ, ಸೂರಜ್ ರೇವಣ್ಣ ಅವರ ಆಪ್ತ ಹನುಮನಹಳ್ಳಿಯ ಶಿವಕುಮಾರ್ ಎಂಬುವರು ದೂರುದಾರನೇ ವಿರುದ್ಧವೇ ಹೊಳೆನರಸೀಪುರ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ದೂರುದಾರ ಜೂ.16ರಂದು ತಮ್ಮ ನಾಯಕ (ಸೂರಜ್)ರ ಬಳಿ ಕೆಲಸ ಕೇಳಲು ಬಂದಿದ್ದರು. ಬಳಿಕ, ನಿಮ್ಮ ನಾಯಕರಿಂದ ಕೆಲಸ ಕೊಡಿಸಲು ಸಾಧ್ಯವಿಲ್ಲ. ನನಗೆ ತುಂಬಾ ಕಷ್ಟವಿದೆ ಎಂದು ಹೇಳಿ 5 ಕೋಟಿ ರು. ಗಾಗಿ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಶಾಸಕರ ವಿರುದ್ಧ ಅನೈಸರ್ಗಿಕ ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದ್ದಲ್ಲದೆ ಖುದ್ದು ಸೂರಜ್ ಅವರೇ ಶನಿವಾರ ಸಂಜೆ ಹಾಸನ ಪೊಲೀಸ್ ಠಾಣೆಗೆ ಬಂದು ದೂರು ದಾರನ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.