ನೀಟ್ ಪ್ರಶ್ನಾ ಪತ್ರಿಕೆ ಸೋರಿಕೆ – ಎನ್‌ಟಿಎ ಮುಖ್ಯಸ್ಥ ಸುಬೋಧ್ ಕುಮಾರ್ ವಜಾ – ಇಂದು ನಡೆಯಬೇಕಿದ್ದ ನೀಟ್ ಪ್ರವೇಶ ಪರೀಕ್ಷೆ ಮುಂದೂಡಿಕೆ

ಮಂಗಳೂರು/ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ 2024ನೇ ಸಾಲಿನ ನೀಟ್ ಹಾಗೂ ನೆಟ್​​ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಡಿಜಿ ಸುಬೋಧ್​ ಕುಮಾರ್​ ಅವರನ್ನು ವಜಾಗೊಳಿಸಲಾಗಿದ್ದು, ಇಂದು ನಡೆಯಬೇಕಿದ್ದ ನೀಟ್ ಪ್ರವೇಶ ಪರೀಕ್ಷೆಯನ್ನು ಮುಂದೂಡಿದೆ.

ನೀಟ್ ಪ್ರವೇಶ ಪರೀಕ್ಷೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಡಿಜಿ ಸುಬೋಧ್​ ಕುಮಾರ್​ ಅವರನ್ನು ವಜಾಗೊಳಿಸಲಾಗಿದೆ. ನೀಟ್, ನೆಟ್ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್​ನಲ್ಲಿ ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲಾಗಿದೆ. ಈ ವೇಳೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ನೋಟಿಸ್ ಜಾರಿ ಮಾಡಲಾಗಿದ್ದು  ಜುಲೈ 8ಕ್ಕೆ ವಿಚಾರಣೆ ಮುಂದೂಡಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅವರನ್ನು ಎನ್ ಟಿಎ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದ್ದು, ಪ್ರಸ್ತುತ ಖರೋಲಾ ಅವರು ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ಸಂಪಾದಕರಾಗಿದ್ದಾರೆ. ನಿಯಮಿತ ಪದಾಧಿಕಾರಿಯನ್ನು ನೇಮಿಸುವವರೆಗೆ ಅಥವಾ ಮುಂದಿನ ಆದೇಶದವರೆಗೆ ಎನ್‌ಟಿಎ ಯ ಮಹಾನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಇಂದು ನಡೆಯಬೇಕಿದ್ದ ನೀಟ್-ಪಿಜಿ ಪ್ರವೇಶ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಈ ಪರೀಕ್ಷೆಯ ಹೊಸ ದಿನಾಂಕವನ್ನು ಆದಷ್ಟು ಬೇಗ ತಿಳಿಸಲಾಗುವುದು ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರತೆಗೆ ಸಂಬಂಧಿಸಿದಂತೆ ಇತ್ತೀಚಿನ ಆರೋಪಗಳ ಘಟನೆಗಳನ್ನು ಪರಿಗಣಿಸಿ, ಆರೋಗ್ಯ ಸಚಿವಾಲಯವು ರಾಷ್ಟ್ರೀಯ ವೈದ್ಯಕೀಯ ಪರೀಕ್ಷಾ ಮಂಡಳಿಯು ನಡೆಸುವ ನೀಟ್-ಪಿಜಿ ಪ್ರವೇಶ ಪರೀಕ್ಷೆಯ ಪ್ರಕ್ರಿಯೆಗಳ ದೃಢತೆಯ ಸಂಪೂರ್ಣ ಮೌಲ್ಯಮಾಪನವನ್ನು ಕೈಗೊಳ್ಳಲು ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here