ಮಂಗಳೂರು/ನವದೆಹಲಿ: ಏಳು ಬಾರಿ ಸಂಸದರಾಗಿರುವ ಬಿಜೆಪಿಯ ಭರ್ತೃಹರಿ ಮಹತಾಬ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿರುವ ವಿರೋಧ-ಗದ್ದಲದ ನಡುವೆ, 18 ನೇ ಲೋಕಸಭೆಯ ಚೊಚ್ಚಲ ಅಧಿವೇಶನ ಇಂದು(ಜೂ.24) ಆರಂಭವಾಗಲಿದೆ.
ವಿಶೇಷ ಸಂಸತ್ ಅಧಿವೇಶನದ ಮೊದಲ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿ ಮಂಡಲ ಸೇರಿದಂತೆ ಹೊಸದಾಗಿ ಚುನಾಯಿತರಾದ 280 ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಉಳಿದ 264 ಸಂಸದರು ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೂನ್ 26 ರಂದು ಲೋಕಸಭಾ ಸ್ಪೀಕರ್ ಆಯ್ಕೆ ಮತ್ತು ಜೂನ್ 27 ರಂದು ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ.
ನೂತನ ಸ್ಪೀಕರ್ ಆಯ್ಕೆಯ ತನಕ ಸದನದ ಕಲಾಪಗಳನ್ನು ಕೈಗೊಳ್ಳಲು ಮಹತಾಬ್‌ಗೆ ಸಹಾಯ ಮಾಡಲು ಮೂವರು ವಿರೋಧ ಪಕ್ಷದ ಸಂಸದರು ಅಧ್ಯಕ್ಷರ ಸಮಿತಿಯಿಂದ ಹಿಂದೆ ಸರಿಯಲು ಪರಿಗಣಿಸಿರುವುದರಿಂದ ಹಂಗಾಮಿ ಸ್ಪೀಕರ್ ನೇಮಕ ಕುರಿತ ಗದ್ದಲ ಇಂದು ಸದನದಲ್ಲಿ ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಕಳೆದ ವಾರದ ಆರಂಭದಲ್ಲಿ ರಾಷ್ಟ್ರಪತಿಗಳು ಮಹತಾಬ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದರು. ಸಮಿತಿಯನ್ನು ಬಹಿಷ್ಕರಿಸುವ ಕುರಿತು ಸೋಮವಾರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್‌ನ ಕೋಡಿಕುನ್ನಿಲ್ ಸುರೇಶ್ ಹೇಳಿದ್ದಾರೆ. ಸಭಾಧ್ಯಕ್ಷ ಮತ್ತು ಉಪಸಭಾಪತಿ ಹುದ್ದೆಗಳ ಆಯ್ಕೆ ವಿಚಾರದಲ್ಲಿ ಪ್ರತಿಪಕ್ಷಗಳು ಮತ್ತು ಸರಕಾರಗಳು ಜಟಾಪಟಿ ನಡೆಸುವ ಸಾಧ್ಯತೆ ಇದೆ. ಸರ್ಕಾರ ತನ್ನ ಸ್ಪೀಕರ್ ಅಭ್ಯರ್ಥಿಯ ಬಗ್ಗೆ ಗೌಪ್ಯವಾಗಿರಿಸಿದೆ.
ಜೂನ್ 28 ರಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯು ಸದನದಲ್ಲಿ ಭಾರೀ ಗದ್ದಲ-ಕೋಲಾಹಲಕ್ಕೆ ಕಾರಣವಾಗಬಹುದು. ನೀಟ್-ಯುಜಿ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳು, ಹೊಸ ಕ್ರಿಮಿನಲ್ ಕಾನೂನುಗಳು ಮತ್ತು ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತ ಸೇರಿದಂತೆ ವಿವಿಧ ವಿಷಯಗಳ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಮುಂದಾಗಿದ್ದು ಸಿದ್ಧತೆ ಮಾಡಿಕೊಂಡಿದೆ. ಜುಲೈ 2 ಅಥವಾ 3 ರಂದು ಪ್ರಧಾನ ಮಂತ್ರಿಗಳು ಸದನದಲ್ಲಿ ಚರ್ಚೆಗೆ ಪ್ರತಿಕ್ರಿಯಿಸುವ ಸಾಧ್ಯತೆಯಿದೆ. ನಂತರ ಸಂಸತ್ ಕಲಾಪ ಅಲ್ಪ ವಿರಾಮ ಪಡೆದು ಜುಲೈ 22ರಂದು ಬಜೆಟ್ ಮಂಡನೆ ವೇಳೆ ಮತ್ತೆ ಸೇರಲಿದೆ.