ಮಂಗಳೂರು/ಶಿವಮೊಗ್ಗ: ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ನಾಲ್ಕು ವರ್ಷಗಳಿಂದ ಸಂಬಂಧ ಬೆಳೆಸಿ, ಲೈಂಗಿಕ ದೌರ್ಜನ್ಯ ನಡೆಸುವ ಜೊತೆಗೆ ಕುಟುಂಬಕ್ಕೆ ಜೀವಬೆದರಿಕೆ ಒಡ್ಡಿರುವ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸರು ಮಾಜಿ ಸಚಿವ, ಬಿಜೆಪಿ ಮುಖಂಡ ಹರತಾಳು ಹಾಲಪ್ಪ ಅವರ ಬಲಗೈ ಬಂಟ ಅರುಣ್ ಕುಗ್ವೆ ಎಂಬಾತನನ್ನು ಬಂಧಿಸಿದ್ದಾರೆ.
ಯುವತಿ ದಾಖಲಿಸಿದ ದೂರಿನ ಹಿನ್ನಲೆಯಲ್ಲಿ ಶಿವಮೊಗ್ಗ ನಗರದ ಮಹಿಳಾ ಠಾಣೆ ಪೊಲೀಸರು ಅರುಣ್ ಕುಗ್ವೆಯನ್ನು ಅವನ ಮನೆಯಿಂದ ಬಂಧಿಸಿ ಕರೆದೊಯ್ದಿದ್ದಾರೆ. ಉದ್ಯಮಿ ಮತ್ತು ರಾಜಕಾರಣಿ ಎಂದು ಹೇಳಿಕೊಂಡಿದ್ದ ಅರುಣ್ ಕುಮಾರ್ ತನ್ನೊಂದಿಗೆ ಸಂಪರ್ಕ ಬೆಳೆಸಿದ ನಂತರದ ವಿವಿಧ ಆಮಿಷ ತೋರಿಸಿ ಮದುವೆಯಾಗುತ್ತೇನೆ ಎಂದು ಹೇಳುತ್ತಾ, ಬಲಾತ್ಕಾರ ಮಾಡಿರುತ್ತಾನೆ. ಜೋಗ, ಶಿವಮೊಗ್ಗ ಮತ್ತಿತರ ಕಡೆಗಳಲ್ಲಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿರುತ್ತಾನೆ. ಬಲಾತ್ಕಾರವಾಗಿ ವಿಡಿಯೋ ಚಿತ್ರೀಕರಣ, ಫೋಟೋ ತೆಗೆದುಕೊಂಡಿದ್ದಾನೆ. ರೌಡಿ ಎಲಿಮೆಂಟ್ ಆಗಿರವ ಅರುಣ್ ತನ್ನ ಬೇಡಿಕೆಗೆ ಒಪ್ಪದಿದ್ದರೆ ಮರ್ಡರ್ ಮಾಡಿ ಜೈಲಿಗೆ ಹೋಗುವ ಬೆದರಿಕೆ ಒಡ್ಡಿರುತ್ತಾನೆ. ಇತ್ತೀಚೆಗೆ ಬೇರೆ ಹುಡುಗಿಯರೊಂದಿಗೆ ಇದೇ ರೀತಿ ವರ್ತಿಸಿದ್ದು ಕಂಡು ಬಂದಾಗ ಆ ಬಗ್ಗೆ ಕೇಳಿದ್ದಕ್ಕೆ ಜೀವ ಬೆದರಿಕೆ ಒಡ್ಡಿರುತ್ತಾನೆ. ಈ ನಡುವೆ ಬೇರೊಬ್ಬ ಯುವತಿಯೊಂದಿಗೆ ಮದುವೆ ನಿಶ್ಚಯ ಮಾಡಿಕೊಂಡಿರುತ್ತಾನೆ. ಅದನ್ನು ಪ್ರಶ್ನಿಸಿದ್ದಕ್ಕೆ ಅವನ ಸೋದರ ಗಣೇಶ್ ಎಂಬುವವನು ನನಗೆ ಮತ್ತು ನನ್ನ ಕುಟುಂಬದವರಿಗೆ ಜೀವ ಬೆದರಿಕೆ ಒಡ್ಡಿರುತ್ತಾನೆ ಎಂದು ಯುವತಿ ನೀಡಿದ ದೂರಿನಲ್ಲಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅರುಣ್ ಕುಗ್ವೆ ಮತ್ತು ಗಣೇಶ್ ಇಬ್ಬರ ಮೇಲೆ ಐಪಿಸಿ ಸೆಕ್ಷನ್ 354, 376 ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.