ಬಹುನಿರೀಕ್ಷಿತ ತುಳು ಚಲನಚಿತ್ರ “ಧರ್ಮದೈವ” ಜು. 5ರಂದು ಬೆಳ್ಳಿತೆರೆಗೆ

ಮಂಗಳೂರು: “ಧರ್ಮದೈವ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಧರ್ಮದೈವ ತುಳು ಸಿನಿಮಾ ಜುಲೈ 5 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ಪುಣೆ, ಮುಂಬೈನಲ್ಲಿ ನಡೆದ ಪ್ರೀಮಿಯರ್ ಶೋ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
“ಧರ್ಮ ದೈವ” ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ನಟರಾಜ್, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ ಬೆಳ್ತಂಗಡಿಯಲ್ಲಿ ಭಾರತ್ ಚಿತ್ರಮಂದಿರದಲ್ಲಿ  ತೆರೆಕಾಣಲಿದೆ” ಎಂದು ಚಿತ್ರದ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಳಿಕ ಮಾತಾಡಿದ ನಟ ರಮೇಶ್ ರೈ ಕುಕ್ಕುವಳ್ಳಿ “ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಸೇರಿದಂತೆ ಅನೇಕ ಸಾನಿಧ್ಯ ಸ್ಥಳಗಳು, ದೈವಾರಾಧನೆ ನಾಗಾರಾಧನೆಗೆ ಪ್ರಸಿದ್ಧಿ ಪಡೆದಿವೆ. ಇಂದು ತುಳುನಾಡು, ತುಳು ಭಾಷೆ, ದೇಶ-ವಿದೇಶ ತುಂಬಾ ಮಾನ್ಯತೆ ಪಡೆದಿದೆ.
ಸಿನಿಮಾ ಮಾಧ್ಯಮ ಇಂದು ಪರಿಣಾಮಕಾರಿ ಶ್ರೀಮಂತ ಮಾಧ್ಯಮವಾಗಿ ಬೆಳಗುತ್ತಿದೆ. ಈ ನಾಡಿನ ರೈತಾಪಿ ಜನರು ತಮ್ಮ ಬೇಸಾಯ- ಕೃಷಿ,ತೋಟಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ತುಳುನಾಡಿನ ದೈವ, ದೇವರು, ನೇಮ, ಕೋಲ, ತಂಬಿಲ, ನಾಗಾರಾಧನೆ, ದೈವಾರಾಧನೆ ಮೂಲಕ ಈ ಮಣ್ಣಿನ, ಬದುಕಿನ ಕಥೆಯನ್ನು ಕಟ್ಟಿಕೊಡುವ ತುಳು ಚಲನಚಿತ್ರ “ಧರ್ಮ ದೈವ” ಬೆಳ್ಳಿ ತೆರೆಯಲ್ಲಿ ಮೂಡಿಬರಲು ಸಿದ್ಧವಾಗಿದೆ. ತುಳುವರು ಸಿನಿಮಾ ನೋಡಿ ಕಲಾವಿದರನ್ನು ಬೆಳೆಸಿ” ಎಂದರು.
ನಟ ಚೇತನ್ ರೈ ಮಾಣಿ ಮಾತನಾಡಿ, “ಇಂದು ನಮ್ಮ ಯುವ ಜನಾಂಗ ತಮ್ಮ ಹಿರಿಯರು ಬಾಳಿಬೆಳಗಿದ ರೀತಿ, ನೀತಿ, ನಂಬಿಕೆ, ಸಂಸ್ಕೃತಿ, ನಡವಳಿಕೆಗಳಿಗೆ ಪ್ರಾಧಾನ್ಯತೆ ಕೊಟ್ಟು ಚಿತ್ರ-ಕಥೆಗಳನ್ನು ನಿರ್ಮಿಸುವ ಮೂಲಕ ಹಿರಿಯರ, ಸಂಘ, ಸಂಸ್ಥೆಗಳ ಅಭಿಮಾನಕ್ಕೂ ಪಾತ್ರರಾಗಿರುವರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದ ವಿಶೇಷವಾಗಿ ಉಡುಪಿ, ಮಂಗಳೂರು ಮತ್ತು ಪುತ್ತೂರಿನ ಯುವಕರು ತಾವೇ ಸೇರಿಕೊಂಡು ಧರ್ಮದೈವ ಪ್ರೊಡಕ್ಷನ್ಸ್ ಲಾಂಛನದಲ್ಲಿ “ಧರ್ಮ ದೈವ” ಎಂಬ ಹೆಸರಿನಲ್ಲಿ ಒಂದು ಪೂರ್ಣ ಚಲನಚಿತ್ರವನ್ನು ನಿರ್ಮಾಣ ಮಾಡಿ ಸೆನ್ಸಾರ್ ಮಂಡಳಿಯಿಂದ ಮಾನ್ಯತೆ ಪಡೆದು ಜುಲೈ 5 ರಂದು ಬೆಳ್ಳಿತೆರೆಯಲ್ಲಿ ಮೂಡಿಬರಲಿದೆ.
ಯುವ ನಿರ್ಮಾಪಕ ಬಿಳಿಯೂರು ರಾಕೇಶ್ ಭೋಜರಾಜ ಶೆಟ್ಟಿ, “ಧರ್ಮದೈವ” ತುಳು ಚಲನ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಚಿತ್ರೀಕರಣ ಬಹುತೇಕ ಕೇರಳ ಗಡಿಭಾಗದಲ್ಲಿರುವ ಕರ್ನೂರಿನಲ್ಲಿ ಮತ್ತು ಸುಳ್ಯ, ಪುತ್ತೂರು ತಾಲೂಕಿನ ಸುತ್ತಮುತ್ತ ಸುಮಾರು 25 ದಿನ ನಡೆದಿದೆ ಎಂದು ಮಾಹಿತಿ ನೀಡಿದರು.

ಚಿತ್ರ ಕಥೆ- ಸಂಭಾಷಣೆಯನ್ನು ಹಮೀದ್ ಪುತ್ತೂರು ಬರೆದಿದ್ದಾರೆ. ಅರುಣ್ ರೈ ಪುತ್ತೂರು ಇವರ ಛಾಯಾಗ್ರಹಣ, ಸಂಗೀತ ಮತ್ತು ಹಿನ್ನೆಲೆ ಸಂಗೀತ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇವರ ಶಿಷ್ಯ ನಿಶಾನ್ ರೈ ಮಠಂತಬೆಟ್ಟು, ಸಾಹಿತ್ಯ: ಕೆ.ಕೆ ಪೇಜಾವರ್, ಸುಮಂತ್ ಬೈಲಾಡಿ, ಹಿನ್ನೆಲೆ ಗಾಯನ: ಖ್ಯಾತ ಯಕ್ಷಗಾನ ಭಾಗವತರು ಪಟ್ಲ ಸತೀಶ್ ಶೆಟ್ಟಿ, ಕು.ಸಮನ್ವಿ ಆರ್.ರೈ ನುಳಿಯಾಲು, ಚಿತ್ರ ಸಂಕಲನ: ರಾಧೇಶ್ ರೈ ಮೊಡಪ್ಪಾಡಿ ಮತ್ತು ಶ್ರೀನಾಥ್ ಪವಾರ್, ಸಹ ಸಂಕಲನ: ಚರಣ್ ಆಚಾರ್ಯ, ಶೀರ್ಷಿಕೆ ವಿನ್ಯಾಸ: ನಿತಿನ್ ಕಾನಾವು, ವಸ್ತ್ರ ವಿನ್ಯಾಸ: ಸಾತ್ವಿಕಾ ನಿತಿನ್ ರೈ ಕುಂಜಾಡಿ, ಮನೋಜ್ ಕುಮಾರ್, ಸ್ಥಿರಚಿತ್ರ: ಅಭಿಪೂಜಾರ್, ಪ್ರಣವ್ ಭಟ್, ಧ್ವನಿ ಸಂಕಲನ: ಚಿದಾನಂದ ಕಡಬ. ಟಿ.ಟಿ.ಎಸ್ :ಲಾಯ್ ವೇಲೆಂಟೈನ್, ಪ್ರಸಾಧನ: ಕಿಶೋರ್ ಉಪ್ಪಿನಂಗಡಿ, ನಿರ್ಮಾಣದಲ್ಲಿ ಸುಧೀರ್ ಕುಮಾರ್ ಕಲ್ಲಡ್ಕ ಮತ್ತು ರಾಕೇಶ್ ಶೆಟ್ಟಿ ಜಿ ಅವರ ಸಹಕಾರವು ಈ ಚಿತ್ರಕ್ಕಿದೆ. ಈ ಚಿತ್ರದಲ್ಲಿ ದೈವದ ನಂಬಿಕೆ- ಇರುವಿಕೆಯನ್ನು ಮಾತ್ರ ಸಾದರ ಪಡಿಸಲಾಗಿದೆ. ನವರಸ ಭರಿತವಾಗಿರುವ “ಧರ್ಮದೈವ” ತುಳು ಚಲನ ಚಿತ್ರದ ತಾರಾಗಣದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ, ರೂಪಶ್ರೀ ವರ್ಕಾಡಿ, ದಯಾನಂದ ರೈ ಬೆಟ್ಟಂಪಾಡಿ, ಭರತ್ ಶೆಟ್ಟಿ, ರವಿ ಸಾಲ್ಯಾನ್ (ಸ್ನೇಹಿತ್), ಸಂದೀಪ್ ಪೂಜಾರಿ, ಪುಷ್ಪರಾಜ್ ಬೊಳ್ಳರ್ ,ರಂಜನ್ ಬೋಳಾರ್, ಕೌಶಿಕ್ ರೈ ಕುಂಜಾಡಿ,ದೀಕ್ಷಾ ಡಿ.ರೈ, ಹಾಗೂ ಗ್ರೇಷಿಯಲ್ ಕಲಿಯಂಡ ಕೊಡಗು ಮೊದಲಾದವರು ಅಭಿನಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಬಿಳಿಯೂರು ರಾಕೇಶ್ ಭೋಜರಾಜ ಶೆಟ್ಟಿ, ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ , ರಮೇಶ್ ರೈ ಕುಕ್ಕುವಳ್ಳಿ, ಚೇತನ್ ರೈ ಮಾಣಿ, ಅರುಣ್ ರೈ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here