ಮಂಗಳೂರು/ಉಡುಪಿ: ಖಾಸಗಿ ಬಸ್ ಚಾಲಕ ಹಾಗೂ ಆತನ ಪ್ರೇಯಸಿಯ ಮಧ್ಯೆ ಬಸ್‌ನಲ್ಲಿ ವಾಗ್ವಾದ ನಡೆದು ಚಾಲಕ ಬಸ್ ನಿಲ್ಲಿಸಿ ಪರಾರಿಯಾದ ಘಟನೆ ನಡೆದಿದೆ.
ಖಾಸಗಿ ಬಸ್ ಉಡುಪಿಯಿಂದ ಸಂತೆಕಟ್ಟೆ ಭಾಗಕ್ಕೆ ತೆರಳುತ್ತಿದ್ದಾಗ ನಿಟ್ಟೂರು ಬಳಿ ಬಸ್ ಚಾಲಕನ ಪ್ರೇಯಸಿ ಬಸ್ ಹತ್ತಿದ್ದಾಳೆ. ಅಲ್ಲಿಂದಲೇ ಅವರ ನಡುವೆ ವಾಗ್ವಾದ ನಡೆದಿದೆ. ನಿರ್ವಾಹಕ ಸಮಾಧಾನಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಶೀರ್ವಾದ್ ಚಿತ್ರಮಂದಿರದ ಸ್ವಲ್ಪ ಮುಂದಕ್ಕೆ ಪ್ರೇಯಸಿಯ ಕಿರಿಕಿರಿಯಿಂದ ರೋಸಿ ಹೋದ ಚಾಲಕ ಬಸ್ ನಿಲ್ಲಿಸಿ ಇಳಿದು ಹೋಗಿದ್ದಾನೆ. ಪ್ರೇಯಸಿ ಮತ್ತೊಂದು ದಾರಿ ಹಿಡಿದು ಹೋಗಿದ್ದಾಳೆ. ಪ್ರಯಾಣಿಕರು ಇದನ್ನೆಲ್ಲ ನೋಡಿ ಬಸ್ಸಿನಲ್ಲಿ ಬಾಕಿಯಾಗಿದ್ದಾರೆ. ಬಳಿಕ ಬಸ್ ನಿರ್ವಾಹಕನೇ ಬಸ್ ಚಾಲಕನಾದ ಘಟನೆ ನಡೆದಿದೆ. ಬಸ್ ನಿಲ್ಲಿಸಿ ತೆರಳಿದ ಚಾಲಕನ ನಿರ್ಲಕ್ಷ್ಯತನಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ ಹಿಡಿಶಾಪ ಹಾಕಿದ್ದಾರೆ.