ಮಂಗಳೂರು: ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್‌ನಲ್ಲಿ ಮನೆ ಕಳ್ಳತನ ನಡೆದಿದೆ.
ಜು.7ರ ನಸುಕಿನ ವೇಳೆ ಕೋಡಿಕಲ್‌ನ ವಿವೇಕಾನಂದ ನಗರದಲ್ಲಿ ಮನೆಯವರು ಮಲಗಿದ್ದಾಗ ಕಳ್ಳರು ನುಗ್ಗಿದ್ದಾರೆ. 2.04ರ ಗಂಟೆಯ ಸುಮಾರಿಗೆ ಮನೆಯ ಕಿಟಕಿಯ ಸರಳುಗಳನ್ನು ಕಿತ್ತು ಒಳನುಗ್ಗಿರುವ 5 ಮಂದಿ ಕಳ್ಳರ ತಂಡ ಮನೆಯ ಕೋಣೆಯೊಂದರಲ್ಲಿ ಜಾಲಾಡಿ ಬಳಿಕ ಮನೆಯವರು ಮಲಗಿದ್ದ ಬೆಡ್‌ರೂಮ್‌ಗೂ ಪ್ರವೇಶಿಸಿದ್ದು ಕಪಾಟಿನಲ್ಲಿ ಇಟ್ಟಿದ್ದ 10,000 ರೂ. ನಗದು ಕಳವು ಮಾಡಿದ್ದಾರೆ.
ಕೃತ್ಯ ನಡೆದಿರುವ ಮನೆಯ ಪಕ್ಕದ ಮನೆಯೊಂದರಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಕಳ್ಳರ ಕೃತ್ಯದ ಕೆಲವು ದೃಶ್ಯಗಳು ಸೆರೆಯಾಗಿದ್ದು ಚಡ್ಡಿ ಧರಿಸಿರುವ 5 ಮಂದಿ ಕಳ್ಳರು ಕೈಯಲ್ಲಿ ಟಾರ್ಚ್ ಹಿಡಿದುಕೊಂಡು ಮನೆಯ ಬಳಿ ನಸುಕಿನ ವೇಳೆ 2.04ಕ್ಕೆ ಒಳಪ್ರವೇಶಿಸಿ 3.42ಕ್ಕೆ ವಾಪಸಾಗಿದ್ದಾರೆ. ಕಳ್ಳರು ಮನೆಯಿಂದ ಹೊರಗೆ ಬರುವಾಗ ರಸ್ತೆಯಲ್ಲಿ ವಾಹನವೊಂದು ಹಾದು ಹೋಗಿದ್ದು ಅದನ್ನು ಕಂಡು ಗೇಟ್ ಬಳಿಯಲ್ಲೇ ನಿಂತ ಕಳ್ಳರು ಅನಂತರ ರಸ್ತೆಗೆ ಬಂದಿದ್ದಾರೆ. ತಂಡದ ಓರ್ವನ ಬಳಿ ಬ್ಯಾಗ್ ಇತ್ತು. ಈ ಮನೆ ರಸ್ತೆ ಪಕ್ಕದಲ್ಲೇ ಇದ್ದು ಇದರ ಅಕ್ಕಪಕ್ಕವೂ ಮನೆಗಳಿವೆ. ಅಲ್ಲದೆ ಬೊಗಳುತ್ತಿದ್ದ ನಾಯಿಯ ಕಡೆಗೆ ಓರ್ವ ಕಳ್ಳ ಕಲ್ಲು ಎಸೆಯುತ್ತಿರುವುದು ಕೂಡ ಸಿಸಿ ಕ್ಯಾಮರಾ ದೃಶ್ಯದಲ್ಲಿದೆ. ಕಳ್ಳರ ಡ್ರೆಸ್ ಕೋಡ್ ನೋಡಿದರೆ ಅದು ಚಡ್ಡಿ ಗ್ಯಾಂಗ್‌ನ ಡ್ರೆಸ್‌ಕೋಡ್‌ನ್ನು ಹೋಲುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಮರುದಿನ ಬೆಳಿಗ್ಗೆ ಮನೆ ಮಂದಿಯ ಗಮನಕ್ಕೆ ಬಂದಿದ್ದು ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ.ಕ, ಉಡುಪಿ ಭಾಗದಲ್ಲಿ “ಚಡ್ಡಿ ಗ್ಯಾಂಗ್’ ಎಂಬ ಕಳ್ಳರ ತಂಡ ಕ್ರಿಯಾಶೀಲವಾಗಿರುವ ಮಾಹಿತಿ ಪೊಲೀಸರಿಗೆ ಲಭಿಸಿದೆ. ಹೈದರಾಬಾದ್, ಮಧ್ಯಪ್ರದೇಶ, ರಾಜಸ್ಥಾನ ಮೊದಲಾದೆಡೆ ಕಳ್ಳರನ್ನು ಹೊಂದಿರುವ ಗ್ಯಾಂಗ್ ಈ ಹಿಂದೆಯೂ ದ.ಕ., ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮನೆ ಕಳ್ಳತನದ ಕೃತ್ಯ ನಡೆಸಿತ್ತು. ಶನಿವಾರ ರಾತ್ರಿ ಇದೇ ತಂಡ ಕೃತ್ಯವೆಸಗಿರುವ ಬಗ್ಗೆ ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ. ಮೈಮೇಲೆ ಚಡ್ಡಿ, ಬನಿಯಾನ್, ಮತ್ತು ತಲೆ ಮೇಲೊಂದು ಬಟ್ಟೆ ಸುತ್ತಿಕೊಳ್ಳುವ ಈ ಗ್ಯಾಂಗ್‌ನ ಸದಸ್ಯರು ಸೊಂಟದಲ್ಲಿ ಆಯುಧಗಳನ್ನು ಇಟ್ಟುಕೊಂಡಿರುತ್ತಾರೆ. ಸಾಮಾನ್ಯವಾಗಿ ನಿರಂತರ ಮಳೆಯಾಗುವ ದಿನಗಳಲ್ಲಿ ರಾತ್ರಿ ವೇಳೆ ಮನೆಮಂದಿ ಗಾಢ ನಿದ್ದೆಯಲ್ಲಿರುವಾಗ ಚಡ್ಡಿ ಗ್ಯಾಂಗ್ ತಂಡ ಕಾರ್ಯಾಚರಣೆಗೆ ಇಳಿಯುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಸಕ್ರಿಯವಾಗಿರುವ ಈ ಗ್ಯಾಂಗ್ ಬಗ್ಗೆ ಎಚ್ಚರ ವಹಿಸಲು ಪೊಲೀಸರು ಸೂಚನೆ ನೀಡಿದ್ದಾರೆ.
ರಾತ್ರಿ ಸಮಯ ಮನೆಯ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಳ್ಳಬೇಕು/ ಬೆಲೆಬಾಳುವ ಸೊತ್ತುಗಳನ್ನು ಮನೆಯಲ್ಲಿಡದೆ ಬ್ಯಾಂಕ್‌ನ ಸೇಫ್ ಲಾಕರ್‌ನಲ್ಲಿಡಬೇಕು/ ತಮ್ಮ ಮನೆಯ ಮತ್ತು ವಾಸ್ತವ್ಯದ ಪರಿಸರದಲ್ಲಿ ಇರುವ ಸಿಸಿ ಕ್ಯಾಮರಾಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು/ ಯಾವುದೇ ಅಪರಿಚಿತ/ಸಂಶಯಾಸ್ಪದ ವ್ಯಕ್ತಿಗಳು, ಮಹಿಳೆಯರು ಕಂಡು ಬಂದಲ್ಲಿ ಕೂಡಲೇ ತುರ್ತು ಕರೆ ಸೇವೆ 112 ಅಥವಾ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಬೇಕು/ ವಸತಿ/ಬಡಾವಣೆ/ಪರಿಸರದಲ್ಲಿ ದಾರಿ ದೀಪ, ಸಾರ್ವಜನಿಕ ದೀಪಗಳು ಉರಿಯುತ್ತಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮೆಸ್ಕಾಂ/ಮಂಗಳೂರು ಮಹಾನಗರ ಪಾಲಿಕೆ/ಸ್ಥಳೀಯ ಕಾರ್ಪೊರೇಟರ್‌ಗಳಿಗೆ ತಿಳಿಸಬೇಕು/ ಒಂಟಿ ಮನೆಗಳು/ಲಾಕ್ಡ್ ಹೌಸ್/ಹಿರಿಯ ನಾಗರಿಕರು/ಮಹಿಳೆಯರು ಮಾತ್ರ ವಾಸ್ತವ್ಯ ಇರುವ ಮನೆಗಳು ಇದ್ದಲ್ಲಿ ಬೀಟ್ ಪೊಲೀಸ್‌ರಿಗೆ ಮಾಹಿತಿಯನ್ನು ನೀಡಬೇಕು.