ರಾಹುಲ್ ಗೆ ಕಪಾಳಕ್ಕೆ ಹೊಡೆಯುವ ಹೇಳಿಕೆ – ಶಾಸಕ ಡಾ.ಭರತ್ ಶೆಟ್ಟಿ ಸಂಸ್ಕೃತಿಯನ್ನು ತೋರಿಸುತ್ತದೆ – ಆರ್.ಪದ್ಮರಾಜ್ ತಿರುಗೇಟು

ಮಂಗಳೂರು: ಬಿಜೆಪಿ ಪ್ರತಿಭಟನೆ ವೇಳೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರ ಕಪಾಳಕ್ಕೆ ಹೊಡೆಯಬೇಕು ಎಂಬ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಹೇಳಿಕೆ ಅವರ ಸಂಸ್ಕೃತಿ ಏನು ಎಂಬುದನ್ನು ತೋರಿಸುತ್ತದೆ ಎಂದು ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.

ಭರತ್‌ ಶೆಟ್ಟಿ, ಮಾತನಾಡುವಾಗ ತಾನೊಬ್ಬ ಸುಶಿಕ್ಷಿತ, ವೈದ್ಯ, ಶಾಸಕನಾಗಿದ್ದೇನೆ ಎಂಬುದ್ದಕ್ಕಾದರೂ ಬೆಲೆ ಕೊಡಬೇಕಿತ್ತು. ನೀವು ಮಾತನಾಡುವ ಮಾತು ಹಿಂದೂ ಸಮಾಜ ತಿಳಿಸಿಕೊಟ್ಟ ಸಂಸ್ಕೃತಿಯೇ? ಒಬ್ಬ ಹಿಂದೂ ಸಮಾಜದ ವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಿರುವ ವ್ಯಕ್ತಿ ಸಂವಿಧಾನದ ಹುದ್ದೆಗಾದರೂ ಗೌರವ ಕೊಡಬೇಕಿತ್ತು ಎಂದು ಶಾಸಕರನ್ನು ಟೀಕಿಸಿದ್ದಾರೆ. ಪ್ರತಿಭಟನೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಬೃಜೇಶ್ ಚೌಟ ಅವರೂ ಇದ್ದರು. ನಿಮಗೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುವುದಕ್ಕಿಂತ, ರಾಹುಲ್ ‌ಗಾಂಧಿಯವರು ಏನು ಮಾತನಾಡಿದ್ದಾರೆ. ಆ ಬಗ್ಗೆ ಸದನದಲ್ಲಿ ಪ್ರತಿಕ್ರಿಯಿಸುವ ಅವಕಾಶ ಇತ್ತು. ಅಲ್ಲೇ ಈ ವಿಚಾರದ ಬಗ್ಗೆ ಮಾತನಾಡಬೇಕಿತ್ತು. ಅದು ಬಿಟ್ಟು ರಸ್ತೆಯಲ್ಲಿ ನಿಂತು ಪ್ರತಿಭಟಿಸುವುದಲ್ಲ ಎಂದು ಅವರು ಕಿವಿಮಾತು ಹೇಳಿದ್ದಾರೆ.

ಪ್ರತಿಪಕ್ಷದ ನಾಯಕನಾಗಿ ರಾಹುಲ್‌ಗಾಂಧಿ ಸದನದಲ್ಲಿ ಮಾತನಾಡಿರುವುದನ್ನು ಹಿಂದೂ ಸಮಾಜ ಸೇರಿದಂತೆ ಸ್ವಾಮೀಜಿಗಳು ಸ್ವಾಗತಿಸಿದ್ದಾರೆ. ರಾಹುಲ್ ಗಾಂಧಿ ಹಿಂದೂ ಸಮಾಜದವರನ್ನು ಎಂದೂ ದೂಷಣೆ ಮಾಡಿಲ್ಲ. ಹಿಂದೂ ಸಮಾಜದ ಹೆಸರು ಹೇಳಿಕೊಂಡು ದ್ವೇಷಕಾರುತ್ತಿರುವ ಬಿಜೆಪಿ, ಆರ್.ಎಸ್.ಎಸ್.ನ ದ್ವೇಷದ ರಾಜಕಾರಣವನ್ನು ವಿರೋಧಿಸಿದ್ದಾರೆ ಎಂಬುದು ಸಮಸ್ತ ಭಾರತೀಯರಿಗೆ ತಿಳಿದಿದೆ. ಅದನ್ನು ಶಾಸಕರು ವಿಷಯಾಂತರ ಮಾಡಿ ಮತ್ತೆ ದ್ವೇಷ ಬಿತ್ತುವುದಕ್ಕೆ ಯತ್ನಿಸಿದ್ದಾರೆ. ಶಾಸಕರು ದ್ವೇಷ ಬಿತ್ತುವುದನ್ನು ಕೈಬಿಟ್ಟು ಕೂಡಲೇ ರಾಹುಲ್ ಗಾಂಧಿಯವರ ವಿರುದ್ಧ ನೀಡಿದ ಹೇಳಿಕೆಗೆ ಕ್ಷಮೆ ಕೇಳಬೇಕೆಂದು ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here