ಕದ್ರಿ ದೇವಾಲಯದ ಒಳಗೆ ನುಗ್ಗಿ ಯುವಕನಿಂದ ದಾಂಧಲೆ – ಥಳಿಸಿ ಯುವಕನನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು

ಮಂಗಳೂರು: ದೇವಾಲಯದ ಒಳಾಂಗಣಕ್ಕೆ ಬೈಕ್ ತಂದು ವ್ಯಕ್ತಿಯೋರ್ವ ದಾಂಧಲೆ ಮಾಡಿದ ಘಟನೆ ಮಂಗಳೂರಿನ ಕದ್ರಿ ದೇವಾಲಯದಲ್ಲಿ ನಡೆದಿದೆ.

ಬೈಕ್ ಚಲಾಯಿಸಿಕೊಂಡು ನೇರ ಕದ್ರಿ ದೇವಸ್ಥಾನದ ಪ್ರಾಂಗಣ ಪ್ರವೇಶಿಸಿದ್ದ ಯುವಕ, ಬಳಿಕ ದೇವಸ್ಥಾನದ ಒಳಗೆ ಪ್ರವೇಶ ಮಾಡಿ ರಂಪಾಟ ಮಾಡಿದ್ದಾನೆ. ಅಲ್ಲದೆ ಅಣ್ಣಪ್ಪ ಸ್ವಾಮಿಯ ಗುಡಿಯ ಮುಂದೆ ಹೋಗಿ ಕಾಲಿನಿಂದ ಬಾಗಿಲು ಒದ್ದು ಅಪಚಾರ ಮಾಡಿದ್ದಾನೆ ಎಂದು ಹೇಳಲಾಗಿದೆ.

ಈ ವೇಳೆ ಪ್ರಶ್ನೆ ಮಾಡಿದ ಅರ್ಚಕರ ಮೇಲೂ ಹಲ್ಲೆಗೆ ಯತ್ನಿಸಿ ಹುಚ್ಚಾಟ ನಡೆಸಿದ್ದಾನೆ. ಅಲ್ಲದೆ ಬಳಿಕ ದೈವಸ್ಥಾನದ ಬಳಿ ಇದ್ದ ಕತ್ತಿಯನ್ನು ಕೈಗೆತ್ತಿಕೊಂಡು ಹುಚ್ಚಾಟ ನಡೆಸಿರೋ ಮಾಹಿತಿ ಇದೆ. ಈ ವೇಳೆ ಸ್ಥಳದಲ್ಲಿದ್ದವರು ಯುವಕನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನನ್ನು ಖಾಸಗಿ ಆಸ್ಪತ್ರೆ ಸೆಕ್ಯೂರಿಟಿ ಸಿಬ್ಬಂದಿ ಸುಧಾಕರ ಆಚಾರ್ಯ ಎಂದು ಗುರುತಿಸಲಾಗಿದೆ.

ಅಣ್ಣಪ್ಪನ ಕಡ್ತಲೆ ಮುಟ್ಟಿದ ಹಿನ್ನೆಲೆ ಶುದ್ದೀಕರಣ ಮಾಡಲಾಗಿದೆ. ಈ ಹಿಂದೆಯ ಸುಧಾಕರ ಆಚಾರ್ಯ ಬೇರೆ ಎರಡು ಮೂರು ದೇವಾಲಯಗಳಿಗೆ ನುಗ್ಗಿ ದಾಂಧಲೆ ನಡೆಸಿರುತ್ತಾನೆ. ಮಾನಸಿಕ ಅಸ್ವಸ್ಥನಂತೆ ಕಾಣಿಸುತ್ತಿದ್ದ ಈತ ದೇವಾಲಯದ ಆವರಣದೊಳಗೆ ಬೈಕ್ ತಂದ ವೇಳೆ ಭಕ್ತರಿಗೂ ಗಾಯಗಳಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಸದ್ಯ ಘಟನೆ ಬಗ್ಗೆ ಕದ್ರಿ ಠಾಣೆಗೆ ದೇವಸ್ಥಾನದ ಮುಖ್ಯಾಧಿಕಾರಿ ದೂರು ನೀಡಿದ್ದು, ಯುವಕನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here