ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ – ರೈಲ್ವೆ ಅಭಿವೃದ್ಧಿ ಕಾರ್ಯಗಳಿಗೆ ನೀಲನಕ್ಷೆ – ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ

ಮಂಗಳೂರು: ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಲು 2 ತಿಂಗಳಲ್ಲಿ ರೂಪುರೇಷೆ ತಯಾರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ರೈಲ್ವೆ ಅಭಿವೃದ್ದಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲು ಬುಧವಾರ (ಜು.17) ಮಂಗಳೂರಿಗೆ ಆಗಮಿಸಿರುವ ಸಚಿವ ವಿ. ಸೋಮಣ್ಣ  ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಕಳೆದ ಸುಮಾರು 40 ವರ್ಷಗಳಿಂದ ಮಂಗಳೂರಿನಲ್ಲಿ ರೈಲ್ವೇ ಆಭಿವೃದ್ಧಿ ನೆನೆಗುದಿಗೆ ಬಿದ್ದಿದ್ದು, ಇದಕ್ಕೆ ಕಾಯಕಲ್ಪ ನೀಡುವ ನಿಟ್ಟನಲ್ಲಿ ಕ್ರಮ ವಹಿಸಲಾಗುವುದು. ತಮಿಳುನಾಡು, ಕೇರಳ ಮತ್ತು ಗೋವಾ, ಮಹಾರಾಷ್ಟ್ರ ನಡುವೆ ಮಂಗಳೂರು, ಕಾರವಾರ ಭಾಗದಲ್ಲಿ ರೈಲ್ವೇ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ರೀತಿ ಆಗಿಲ್ಲ. ಈ ನಿಟ್ಟಿನಲ್ಲಿ ಎರಡು ತಿಂಗಳೊಳಗೆ ತಜ್ಞರು, ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಒಗ್ಗೂಡಿಸಿಕೊಂಡು ನೀಲನಕ್ಷೆ ತಯಾರಿಸಲಾಗುವುದು ಎಂದು ಹೇಳಿದ್ದಾರೆ.

ರಾಜಕಾರಣಿಗಳು, ಅಧಿಕಾರಿಗಳ ನಡುವೆ ಸಮನ್ವಯತೆ ಮಾಡಬೇಕಾದ ಅಗತ್ಯವಿದೆ. ಈಗಾಗಲೇ ಹಲವು ಕಡೆಗಳಲ್ಲಿ ಓಡಾಡುತ್ತಿದ್ದೇನೆ. ಅಶ್ವಿನಿ ವೈಷ್ಣವ್ ಜೊತೆ ಮಾತನಾಡಿ ಮಂಗಳೂರಿನ ರೈಲ್ವೇ ಇಲಾಖೆಗೆ ಸಂಬಂಧಿಸಿದ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸುತ್ತೇನೆ ಎಂದು ಅವರು ಹೇಳಿದರು. ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು ಸಚಿವರಿಗೆ ಮಂಗಳೂರು ರೈಲ್ವೇ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಸಂಸದರಾದ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ವಾಲ್ಮೀಕಿ ಹಗರಣದ ಬಗ್ಗೆ ಸಿಎಂ ಸಿದ್ಧರಾಮಯ್ಯ ಅವರ ಮೌನದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಹಳೇ ಸಿದ್ಧರಾಮಯ್ಯ ಕಳೆದು ಹೋಗಿದ್ದು, ಈಗಿರೋ ಸಿದ್ಧರಾಮಯ್ಯ ಬೇರೆಯಾಗಿದ್ದಾರೆ. ಇವತ್ತಿನ ಸಿದ್ಧರಾಮಯ್ಯ ಅವರು ಎಲ್ಲವೂ ಕಾಣಿಸುತ್ತಿದ್ದರೂ ಸುಮ್ಮನೇ ಕೂತಿದ್ದಾರೆ. ಅವರು ತಮ್ಮನ್ನು ತಿದ್ದಿಕೊಂಡಲ್ಲಿ ಹಳೇ ಸಿದ್ಧರಾಮಯ್ಯ ಆಗ್ತಾರೆ. ಇಂದು ಮಂಗಳೂರಿನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದು, ಮೂಡಾ ಹಗರಣ ಸೇರಿಂದಂತೆ ವಾಲ್ಮೀಕಿ ಹಗರಣದ ಕುರಿತು ಕೂಡಾ ಚರ್ಚೆ ಮಾಡಲಾಗುತ್ತದೆ. ಆದ್ರೆ ನಾನು ಬಂದಿರುವುದು ರೈಲ್ವೇ ಇಲಾಖೆಯ ಸಮಸ್ಯೆ ಬಗ್ಗೆ ಮಾತನಾಡಲು. ಹೀಗಾಗಿ ಮೊದಲ ಆದ್ಯತೆ ರೈಲ್ವೇ ಇಲಾಖೆಯ ಸಮಸ್ಯೆಗೆ ನೀಡಲಾಗುತ್ತದೆ ಎಂದು ಹೇಳಿದರು.

 

LEAVE A REPLY

Please enter your comment!
Please enter your name here