ಮಂಗಳೂರು/ಕಲಬುರಗಿ: ಅನ್ನ ಭಾಗ್ಯ ಅಕ್ಕಿ ಕಳವು ಪ್ರಕರಣದಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ನನ್ನು ಯಾದಗಿರಿಯ ಶಹಾಪುರ ಪೊಲೀಸರು ಕಲಬುರಗಿಯಲ್ಲಿ ಬಂಧಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರದ ಟಿಎಪಿಸಿಎಂಸಿ ಗೋದಾಮಿನಲ್ಲಿ ಅನ್ನ ಭಾಗ್ಯದ ಅಂದಾಜು 2.6 ಕೋಟಿ ಮೌಲ್ಯದ 6077 ಕ್ವಿಂಟಾಲ್ ಅಕ್ಕಿ ನಾಪತ್ತೆಯಾಗಿತ್ತು. ಕಳೆದ ನವೆಂಬರ್ ತಿಂಗಳಲ್ಲಿ ಆಹಾರ ಇಲಾಖೆ ಉಪ ನಿರ್ದೇಶಕ ಭೀಮರಾಯ ಮಸಾಲಿ ಅವರು ನಾಪತ್ತೆಯಾದ ಬಗ್ಗೆ ಶಹಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಣಿಕಂಠ ರಾಥೋಡ್ ಸಹೋದರ ರಾಜು ರಾಥೋಡ್ ಗೆ ಸೇರಿದ ಗುರುಮಠಕಲ್ ಪಟ್ಟಣದ ಹೊರಭಾಗದ ಶ್ರೀ ಲಕ್ಷ್ಮಿ ತಿಮ್ಮಪ್ಪ ರೈಸ್ ಮೀಲ್ ಮೇಲೆ ಶಹಾಪುರ ಪೊಲೀಸರು ದಾಳಿ ಮಾಡಿ 700 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿದ್ದರು. ನವೆಂಬರ್ ತಿಂಗಳಲ್ಲಿ ಕೇಸ್ ದಾಖಲಿಸಿಕೊಂಡು ಅಕ್ಕಿ ನಾಪತ್ತೆ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಮಣಿಕಂಠ ರಾಥೋಡ್ ಗೆ ನೋಟಿಸ್ ನೀಡಿದ್ದರು. ಆದರೆ, ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಮಣಿಕಂಠ ರಾಥೋಡ್ ನನ್ನು ಬಂಧಿಸಲಾಗಿದೆ.