ಮಂಗಳೂರು: ಇಂದು ಮಂಗಳೂರಿಗೆ ಭೇಟಿ ನೀಡಿರುವ ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ನೂತನ ಸಂಸದ ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದಕ್ಷಿಣ, ನೈರುತ್ಯ ಹಾಗೂ ಕೊಂಕಣ್ ರೈಲ್ವೇ ವಿಭಾಗದ ಮುಖ್ಯಾಧಿಕಾರಿಗಳು ಭಾಗವಹಿಸಿದ್ದಾರೆ. ರೈಲ್ವೇ ಇಲಾಖೆಯ ಕುಂದುಕೊರತೆ ಹಾಗೂ ಮಂಗಳೂರಿನಲ್ಲಿ ರೈಲ್ವೇ ಇಲಾಖೆಯ ಪ್ರಮುಖ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಈ ವೇಳೆ ರೈಲ್ವೇ ಇಲಾಖೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಮಾತನಾಡಿದ ಸಂಸದ ಬ್ರಿಜೇಶ್ ಚೌಟ ಸಭೆಯ ಗಮನ ಸೆಳೆದಿದ್ದಾರೆ. ಮಂಗಳೂರಿನ ಕೇವಲ ಇಪ್ಪತ್ತು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಇರುವ ಮೂರು ರೈಲ್ವೇ ವಿಭಾಗದಿಂದ ಆಗುತ್ತಿರುವ ಪ್ರಮುಖ ಸಮಸ್ಯೆಯನ್ನು ಸಭೆಯಲ್ಲಿ ಬಿಡಿಸಿಟ್ಟಿದ್ದಾರೆ. ಬಂದರು ನಗರಿ ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಿಭಾಗ ಯಾಕೆ ಅಗತ್ಯ ಎಂಬುವುದನ್ನೂ ವಿವರಿಸಿ ಗಮನ ಸೆಳೆದಿದ್ದಾರೆ. ಇನ್ನು ಮೂರು ರೈಲ್ವೇ ಇಲಾಖೆ ಕೂಡಾ ಸ್ಥಳೀಯರನ್ನು ಕಡೆಗಣಿಸಿದ್ದು, ಉದ್ಯೋಗವಕಾಶ ಹಾಗೂ ಟೆಂಡರ್ ಹಂಚಿಕೆಯಲ್ಲಿ ಆದ್ಯತೆ ನೀಡುತ್ತಿಲ್ಲ ಎಂದು ಸಚಿವರ ಗಮನಕ್ಕೆ ತಂದು ಇದನ್ನು ಸರಿಪಡಿಸುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಕೊಂಕಣ್ ರೈಲ್ವೆ ಭಾರತೀಯ ರೈಲ್ವೆ ಜೋಡಣೆ ಮಾಡಿದ್ದಲ್ಲಿ ಪ್ರಯಾಣಿಕರಿಗೆ ದರ ಕಡಿಮೆಯಾಗಲಿದೆ. ಮಂಗಳೂರು- ಬೆಂಗಳೂರು ಪ್ರಯಾಣವನ್ನು ವೈಜ್ಞಾನಿಕವಾಗಿ ಹೈ ಸ್ಪೀಡ್ ಗೆ ಅಭಿವೃದ್ಧಿಪಡಿಸಬೇಕು. ಮತ್ಸ್ಯಗಂಧ ಮಂಗಳೂರು ಎಕ್ಸ್ ಪ್ರೆಸ್ ರೈಲು ಕೋಚ್ ಗೆ ಹೊಸ ರೂಪ ನೀಡಬೇಕು, ಮಂಗಳೂರು ಎಕ್ಸ್ ಪ್ರೆಸ್ ರೈಲು ಕಂಕನಾಡಿಗೆ ಬರುತ್ತಿದ್ದು ಅದು ಮಂಗಳೂರು ಸೆಂಟ್ರಲ್ ಗೆ ಬರುವಂತಾಗಬೇಕು, ಸುರತ್ಕಲ್, ಮೂಲ್ಕಿ ರೈಲು ನಿಲ್ದಾಣದ ಅಭಿವೃದ್ಧಿ, ಕೊಂಕಣ್ ರೈಲು ವಿಭಾಗದ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಪಾಂಡೇಶ್ವರ ಲೆವಲ್ ಕ್ರಾಸಿಂಗ್ ಸಮಸ್ಯೆಯನ್ನು ಸಚಿವರ ಮುಂದಿಟ್ಟ ಸಂಸದರು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಮಂಗಳೂರಿನಲ್ಲಿ ಸಭೆ ನಡೆಸುವಂತೆ ಆಗ್ರಹಿಸಿದರು.
ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಿಭಾಗ ಮಾಡಬೇಕು ಅನ್ನೋ ಬೇಡಿಕೆಯನ್ನು ಸಂಸದ ಚೌಟ ಸಚಿವರ ಮುಂದೆ ಇಟ್ಟಿದ್ದರು. ಇದಕ್ಕಾಗಿ ತನ್ನನ್ನು ಹಲವಾರು ಬಾರಿ ನನ್ನನ್ನು ಭೇಟಿ ಮಾಡಿರುವುದಾಗಿ ಹೇಳಿದ ಸಚಿವ ಸೋಮಣ್ಣ, ಸಮಸ್ಯೆ ಬಗೆ ಹರಿಸುವ ಉದ್ದೇಶದಿಂದ ಮೂರೂ ವಿಭಾಗ ಅಧಿಕಾರಿಗಳನ್ನು ಸಭೆಗೆ ಕರೆದಿರುವುದಾಗಿ ಹೇಳಿದ್ದಾರೆ. ಈ ಮೂವರು ಸಮಸ್ಯೆಯ ಬಗ್ಗೆ ಸಮಾಲೋಚನೆ ನಡೆಸಿ ಕೇಂದ್ರ ಸರ್ಕಾರದ ಮುಂದಿಟ್ಟರೆ ಮಾತ್ರ ಕೇಂದ್ರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಚೌಟಾ ಅವರಿಗೆ ರೈಲ್ವೇ ಇಲಾಖೆಯ ಕುರಿತಾದ ಮಾಹಿತಿ ಬಗ್ಗೆ ಬೆನ್ನುತಟ್ಟಿದ ಸಚಿವ ಸೋಮಣ್ಣ ಸಂಸದರನ್ನು ಪ್ರಶಂಸಿದ್ದಾರೆ.
ಸಭೆಯಲ್ಲಿ ಹಾಜರಿದ್ದ ರೈಲ್ವೇ ಯಾತ್ರಿ ಸಂಘ, ರೈಲ್ವೇ ಬಳಕೆದಾರರ ಸಂಘದವರು ಕೂಡಾ ಸಾಕಷ್ಟು ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದಿದ್ದಾರೆ. ಇದೇ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಸಚಿವರು ಜಿಲ್ಲೆಯ ರೈಲ್ವೇ ಸಮಸ್ಯೆಯನ್ನು ಸರಿಪಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದು, ಕಳೆದ ಹಲವಾರು ವರ್ಷಗಳ ಬೇಡಿಕೆಗಳು ನೆನೆಗುದಿಗೆ ಬಿದ್ದಿದ್ದು ಅದನ್ನು ಆದ್ಯತೆ ಮೇಲೆ ಬಗೆಹರಿಸಲು ಒತ್ತಾಯಿಸಿದ್ದಾರೆ.