ಮಂಗಳೂರು/ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದ್ದು ವ್ಯಕ್ತಿಯೊಬ್ಬ ತನ್ನ ದ್ವಿಚಕ್ರ ವಾಹನದಲ್ಲಿ ನಾಯಿಯನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವುದು ಸಾರ್ವಜನಿಕರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಜು.20ರ ಶನಿವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೊಂಬಗುಡ್ಡೆಯ ನಿವಾಸಿ ಎನ್ನಲಾದ ಈ ವ್ಯಕ್ತಿ ನಾಯಿಯ ಕುತ್ತಿಗೆಗೆ ಸರಪಳಿಯನ್ನು ಜೋಡಿಸಿ ನಂತರ ತನ್ನ ಸ್ಕೂಟರ್‌ನ ಸೀಟಿಗೆ ಇನ್ನೊಂದು ತುದಿಯನ್ನು ಕಟ್ಟಿ ನಾಯಿಯನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದಾನೆ. ಸಾರ್ವಜನಿಕರು ಕ್ರೂರ ಕೃತ್ಯವನ್ನು ಖಂಡಿಸಿದ್ದಾರೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಈತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಶಿರ್ವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.