ಮಂಗಳೂರು: ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಸುರಿದ ಮಳೆಯಿಂದಾಗಿ ನದಿಗಳು ಅಪಾಯದ ಮಟ್ಟ ಮೀರಿ ಉಕ್ಕಿ ಹರಿದಿದ್ದು, 1974ರ ಮಹಾ ಪ್ರವಾಹವನ್ನು(ಮಾರಿ ಬೊಳ್ಳ) ನೆನಪಿಸುವಂತೆ ಮಾಡಿದೆ. ನೇತ್ರಾವತಿ, ಕುಮಾರಧಾರ ನದಿಗಳ ಜತೆಗೆ ಉಪನದಿಗಳು ಕೂಡ ಉಕ್ಕಿ ಹರಿದಿದ್ದು, ಸಾಕಷ್ಟು ನಷ್ಟ, ಹಾನಿ ಉಂಟು ಮಾಡಿದೆ. ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದರೂ ಜನರು ಮಾತ್ರ ಭಯ, ಆತಂಕಗಳಿಂದ ಹೊರಬಂದಿಲ್ಲ.
ಕಳೆದ ಕೆಲವು ದಿನಗಳಿಂದ ನದಿಗಳು ಅಪಾಯದ ಮಟ್ಟ ಮೀರಿ ಹರಿದಿದೆ. ನದಿ ಆಸುಪಾಸು ಜಲಾವೃತಗೊಂಡಿದ್ದು, ಪ್ರವಾಹ ಪೀಡಿತ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಉಪ್ಪಿನಂಗಡಿಯಲ್ಲಿ ನದಿ ಅಪಾಯದ ಮಟ್ಟ 26.5 ಮೀ. ಆಗಿದ್ದು, 31 ಮೀ.ಗೆ ತಲುಪಿತ್ತು. ಹಲವು ಕಡೆ ರಾಷ್ಟ್ರೀಯ ಹೆದ್ದಾರಿಗೂ ನೀರು ನುಗ್ಗಿದೆ. ಶುಕ್ರವಾರ ಸಂಜೆಯ ವೇಳೆಗೆ ತುಂಬೆಯಲ್ಲಿ 8.5 ಮೀ. ಮತ್ತು ಉಪ್ಪಿನಂಗಡಿಯಲ್ಲಿ 26.5 ಮೀ.ಗೆ ನೀರಿನ ಮಟ್ಟ ಇಳಿದಿತ್ತು.
ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರುತ್ತಿದಂತೆ ಜನರು 1974ರ ಜು.25 ಮತ್ತು 26ರಂದು ಬಂದಿದ್ದ ಮಹಾ ಪ್ರವಾಹವನ್ನು(ಮಾರಿ ಬೊಳ್ಳ) ನೆನಪಿಸಿಕೊಂಡಿದ್ದಾರೆ. ಉಪ್ಪಿನಂಗಡಿಯಲ್ಲಿ ಈ ನೆರೆಯ ನೀರಿನ ಮಟ್ಟದ ಗುರುತನ್ನು ಇಂದಿಗೂ ಕಾಣಬಹುದಾಗಿದೆ. 1974ರಲ್ಲಿ ಬಂದಿದ್ದ ಮಹಾ ಪ್ರವಾಹ(ಮಾರಿ ಬೊಳ್ಳ) ಸಂದರ್ಭ ಪಾಣೆಮಂಗಳೂರು ನೇತ್ರಾವತಿ ಸೇತುವೆಯ ಮೇಲೆ ಸುಮಾರು 1 ಅಡಿ ನೀರು ನಿಂತಿತ್ತು. ಹೆದ್ದಾರಿಗಳ ಮೇಲೆ ಆಳೆತ್ತರ ನೀರು ಹರಿದಿತ್ತು. ಸಾವಿರಾರು ಕುಟುಂಬಗಳು ಆಸ್ತಿಪಾಸ್ತಿ ಕಳೆದುಕೊಂಡು ನಿರ್ಗತಿಕರಾಗಿದ್ದರು. ಈ ಘಟನೆ ನಡೆದು ಜು.25 ಕ್ಕೆ ಬರೋಬ್ಬರಿ 50 ವರ್ಷ. ಈ ಐದು ದಶಕಗಳಲ್ಲಿ 1997, 2008, 2009, 2013 ರಲ್ಲಿ ಕುಮಾರಧಾರ ಮತ್ತು ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಾಲಯದ ಬಳಿ ಸಂಗಮ ನಡೆದಿತ್ತು. ಆ ಬಳಿಕ 2018ರಲ್ಲಿ ಎರಡು ಬಾರಿ ಸಂಗಮ(ಅ.14,16) ನಡೆದಿದ್ದು ಚರಿತ್ರೆಯ ಪುಟದಲ್ಲಿ ದಾಖಲಾಗಿದೆ. ಇದಲ್ಲದೆ 2019ರಲ್ಲಿಯೂ(ಅ.9,10) ಸಂಗಮವಾಗಿತ್ತು. ಇದಾದ ಬಳಿಕ 1974ರ ಮಾರಿ ಬೊಳ್ಳವನ್ನು ನೆನಪಿಸುವಂತೆ ಈ ಬಾರಿ ನದಿ ನೀರು ಏರಿಕೆಯಾಗಿದೆ. ಸಂಗಮ ನಡೆಯದಿದ್ದರೂ ಎಲ್ಲೆಡೆ ಪ್ರವಾಹ ಭೀತಿ, ಆತಂಕ ಸೃಷ್ಟಿಯಾಗಿತ್ತು.
ಮಂಗಳೂರು, ಉಡುಪಿ, ಬಂಟ್ವಾಳ ಮತ್ತು ಪುುತ್ತೂರು ತಾಲ್ಲೂಕುಗಳಲ್ಲಿ ದೊಡ್ಡ ಪ್ರಮಾಣದ ನೆರೆ ಸೃಷ್ಟಿಯಾದ ‘ಮಾರಿ ಬೊಳ್ಳ’ 1974ರ ಜು.25 ಗುರುವಾರ ಮತ್ತು ಜು.26 ಶುಕ್ರವಾರ ಸಂಭವಿಸಿದ್ದು ಇದೇ ಜು. 25 ಗುರುವಾರ ಮತ್ತು ಜು.26 ಶುಕ್ರವಾರಕ್ಕೆ ಐದು ದಶಕಗಳನ್ನು ಪೂರೈಸಲಿದೆ. ಅಧಿಕೃತ ದಾಖಲೆಗಳ ಪ್ರಕಾರ, ಮೊದಲ ಮಾರಿ ಬೊಳ್ಳ 1923 ರಲ್ಲಿ ಸಂಭವಿಸಿತ್ತು. ಜೀವಹಾನಿ ಮತ್ತು ಆಸ್ತಿಪಾಸ್ತಿ ಹಾನಿಯ ಬಗ್ಗೆ ವಿವರಗಳಿಲ್ಲದಿದ್ದರೂ, ಇದು ಸಾವಿರಾರು ಗ್ರಾಮಸ್ಥರನ್ನು ಸ್ಥಳಾಂತರಗೊಳ್ಳಲು ಕಾರಣವಾದ ಮೊದಲ ದೊಡ್ಡ ಮಾರಿಬೊಳ್ಳ ಎಂದು ಹೇಳಲಾಗಿದೆ.
ಈ ಹಿಂದೆ ತಾಲೂಕು ಕೇಂದ್ರವಾಗಿದ್ದ ಉಪ್ಪಿನಂಗಡಿ ಪಟ್ಟಣವು 1923ರ ಅತಿಯಾದ ಪ್ರವಾಹದಿಂದಾಗಿ ಕೊಚ್ಚಿಕೊಂಡು ಹೋಗಿತ್ತು. ಆ ಬಳಿಕ ಅಲ್ಲಿದ್ದ ನ್ಯಾಯಾಲಯಗಳನ್ನು ಪುತ್ತೂರಿಗೆ ಸ್ಥಳಾಂತರಿಸಲಾಗಿತ್ತು. ಮಳೆಗಾಲದಲ್ಲಿ ಭಾರಿ ಪ್ರವಾಹದ ಸಮಸ್ಯೆಯಿಂದಾಗಿ ತಾಲೂಕು ಕೇಂದ್ರವನ್ನು ಪುತ್ತೂರಿಗೆ ಸ್ಥಳಾಂತರಿಸಲಾಯಿತು. ಈಗ ಉಪ್ಪಿನಂಗಡಿ ಪುತ್ತೂರು ತಾಲೂಕಿನ 2ನೇ ದೊಡ್ಡ ನಗರ ಪ್ರದೇಶವಾಗಿದೆ. ಎರಡನೇ ಮಾರಿ ಬೊಳ್ಳ, 1974 ರ ಜುಲೈ 25, 26ರಂದು ಅಖಂಡ ದಕ್ಷಿಣ ಕನ್ನಡ ಜಿಲ್ಲೆಯನ್ನು ತಲುಪಿದಾಗ, ಸುಮಾರು ರೂ. 2.52 ಕೋಟಿ ರೂಪಾಯಿ ಪ್ರಮಾಣದ ಹಾನಿ ಸಂಭವಿಸಿತ್ತು. ಈ ನೆರೆ ಹಾನಿಯ ನೆನಪುಗಳು, ಹಿರಿಯರ ಮನಸ್ಸಿನಲ್ಲಿ ಇಂದಿಗೂ ತಾಜಾವಾಗಿದೆ.
ಮಳೆಯ ಋತುವಿನಲ್ಲಿ ಜೀವಂತವಾಗುವ ನೆರೆಯ ನೆನಪುಗಳ ಪ್ರಕಾರ ಆ ಸಮಯದ ಜಿಲ್ಲಾಧಿಕಾರಿ ಜೆ.ಕೆ ಅರೋರಾ ಮತ್ತು ಅವರ ವೈಯಕ್ತಿಕ ಸಹಾಯಕ ವಾಮನ್ ರಾವ್ ಈ ನೆರೆ ಹಾನಿಯನ್ನು ಸಮೀಪದಿಂದ ಕಂಡವರು. ಪಶ್ಚಿಮ ಘಟ್ಟದಿಂದ ಆರಂಭವಾಗುವ ನೇತ್ರಾವತಿ, ಕುಮಾರಧಾರ ಮತ್ತು ಸೀತಾ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದಾಗ ಈ ಇಬ್ಬರು ಅಧಿಕಾರಿಗಳು ನೆರೆಹಾನಿ ಪ್ರದೇಶದ ಸಮೀಕ್ಷೆ ನಡೆಸಲು ಲಾರಿಯಲ್ಲಿ ಪ್ರಯಾಣಿಸಿದ್ದರು. ಬಿ.ಸಿ. ರೋಡ್ ಜಂಕ್ಷನ್ ಬಳಿ ಬೋಟ್ ಬಳಸಿ ಬಂಟ್ವಾಳ ಪಂಚಾಯತ್ ಕಟ್ಟಡದ ಮೇಲೆ ಹತ್ತಿ ಪರಿಶೀಲನೆ ನಡೆಸಿದ್ದರು. ನಿರೀಕ್ಷಣಾ ಮಂದಿರಕ್ಕೆ ಭೇಟಿ ನೀಡಿ ಮನೆ ಮಠ ಆಸ್ತಿಪಾಸ್ತಿ ಕಳೆದುಕೊಂಡ ನೆರೆ ಪೀಡಿತರನ್ನು ಕಂಡು ಮಾತನಾಡಿ ಧೈರ್ಯ ತುಂಬಿದ್ದರು.
ಉಪ್ಪಿನಂಗಡಿ ಪಟ್ಟಣವು 53 ಮೀಟರ್ ಎತ್ತರದಲ್ಲಿದೆ. ಉಪ್ಪಿನಂಗಡಿಯನ್ನು “ದಕ್ಷಿಣ ಕಾಶಿ” ಎಂದೂ ಕರೆಯುತ್ತಾರೆ. ಗುಪ್ತಗಾಮಿನಿ ಎಂದು ಕರೆಯಲ್ಪಡುವ ಇತರ ಎರಡು ನದಿಗಳೊಂದಿಗೆ ಮೂರನೇ ನದಿಯ ಸಂಗಮವೂ ಇದೆ ಎಂದು ನಂಬಲಾಗಿದೆ. ಉಪ್ಪಿನಂಗಡಿಯ ದಂತಕಥೆಯು ಮಹಾಭಾರತದ ಕಾಲದಿಂದಲೂ ಇದೆ. ರಾಜ ಯುಧಿಷ್ಠಿರನು ಅವನ ಸಾರ್ವಭೌಮತ್ವವನ್ನು ಘೋಷಿಸಲು ರಾಜಸೂಯ ಯಜ್ಞವನ್ನು ಮಾಡಲು ನಿರ್ಧರಿಸುತ್ತಾನೆ. ಇದೇ ಕಾರಣಕ್ಕೆ ಭೀಮನನ್ನು ಇಂದಿನ ಉಪ್ಪಿನಂಗಡಿಗೆ ಕಳುಹಿಸಿದ್ದನು ಎಂದು ಸ್ಕಂದ ಪುರಾಣ ಹೇಳುತ್ತದೆ. ಅಲ್ಲಿದ್ದ ಪುರುಷ ಮೃಗ ಎಂಬ ದೊಡ್ಡ ದೈತ್ಯ ಪ್ರಾಣಿಯು ಭೀಮನ ಮೇಲೆ ಆಕ್ರಮಣ ಮಾಡುತ್ತದೆ. ದಾಳಿಯನ್ನು ತಪ್ಪಿಸಲು ಭೀಮ ಪವನ ಪುತ್ರ ಹನುಮಾನ್ ನೀಡಿದ ಕೂದಲನ್ನು ಬೀಳಿಸುತ್ತಾ ಯಜ್ಞ ನಡೆಯಲಿರುವ ಸ್ಥಳದ ದ್ವಾರದವರೆಗೆ ಪುರುಷ ಮೃಗವನ್ನು ಕರೆದೊಯ್ಯುತ್ತಾನೆ. ಈಗಿನ ಉಪ್ಪಿನಂಗಡಿಯಿಂದ ಯಜ್ಞ ದ್ವಾರದವರೆಗೆ ಕೂದಲು ಹಾಕಿದ ಸ್ಥಳದಲ್ಲಿ ಸಹಸ್ರ ಶಿವಲಿಂಗಗಳು ಸೃಷ್ಟಿಯಾಗಿದ್ದವು ಎಂದು ಪುರಾಣ ಹೇಳುತ್ತದೆ. ಮರಳಿನ ಆಳದಲ್ಲಿ ಅಡಗಿರುವ 1000 ಶಿವಲಿಂಗಗಳ ಪೈಕಿ ಒಂದು ಶಿವಲಿಂಗ ನೀರಿನ ಹರಿವು ಕಡಿಮೆಯಾದಾಗ ಮಖೆ ಜಾತ್ರೆ ವೇಳೆ ಗೋಚರಿಸುತ್ತದೆ.
ಕುಮಾರಧಾರ ಮತ್ತು ನೇತ್ರಾವತಿ ನದಿಗಳ ಸಂಗಮ ದೇವಸ್ಥಾನದ ಬಳಿ ನಡೆಯುತ್ತದೆ. ಆದರೆ, ಮಳೆಗಾಲದಲ್ಲಿ ಈ ಸಂಗಮ ನೇರವಾಗಿ ಗರ್ಭಗುಡಿಯ ಮುಂದೆ ನಡೆಯುತ್ತದೆ. ನದಿಗಳ ನೀರಿನಲ್ಲಿ ಸ್ನಾನ ಮಾಡಲು ಇದು ಮಂಗಳಕರ ಕ್ಷಣವೆಂದು ಪರಿಗಣಿಸಲಾಗಿದೆ. ಹಾಗೆಂದು ಈ ಬಾರಿಯೂ ಸಂಗಮ ಸಂಭವಿಸಲಿದೆಯೆಂದು ನೂರಾರು ಭಕ್ತರು ಸಂಗಮ ಸ್ನಾನಕ್ಕಾಗಿ ದೇವಸ್ಥಾನದ ಬಳಿ ನೆರೆದಿದ್ದು ಸಂಗಮ ಸಂಭವಿಸದೆ ನಿರಾಶೆಯಾಗಿದೆ. ಆದರೆ ಅಪಾಯದ ಮಟ್ಟ ಮೀರಿ ನದಿ ನೀರು ಹರಿದರೂ ಈ ಬಾರಿ ವರುಣ ನಮ್ಮ ಪಾಲಿಗೆ ಕರುಣೆ ತೋರಿದ್ದಾನೆ ಎಂಬುವುದು ಈ ಹಿಂದೆ ಪ್ರವಾಹದಿಂದಾಗಿ ಕಷ್ಟ-ನಷ್ಟ ಅನುಭವಿಸಿದವರ ಮಾತು.