ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಚನೆ ಹಿನ್ನೆಲೆಯಲ್ಲಿ ವಾಹನ ಸಂಚಾರ ಸರಾಗಗೊಳಿಸಲು ಶಿಪಾರಸ್ಸು ಮಾಡಲಾದ ಕೆಲವು ದುರಸ್ತಿ ಕಾರ್ಯ ಹಾಗೂ ಇತರ ಕಾರ್ಯಗಳನ್ನು ನಡೆಸುವ ನಿಟ್ಟಿನಲ್ಲಿ ಆ.19ರಿಂದ 21ರವರೆಗೆ ಕೂಳೂರಿನ ಹಳೆಯ ಕಮಾನು ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಆ.19ರಿಂದ 21ರವರೆಗೆ ಘನ ವಾಹನಗಳಿಗೆ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಹಾಗೂ ಬೆಳಗ್ಗೆ 11ರಿಂದ 3 ಗಂಟೆಯವರೆಗೆ ಹೊಸ ಸೇತುವೆಯಲ್ಲಿ ಸಂಚರಿಸಲು ಅನುಮತಿಸಲಾಗಿದೆ. ಈ ಅವಧಿಯಲ್ಲಿ ಹೊಸ ಸೇತುವೆಯನ್ನು ಘನ ವಾಹನಗಳ ದ್ವಿಮುಖ ಸಂಚಾರಕ್ಕೆ ಉಪಯೋಗಿಸಲಾಗುವುದು. ಕುಳೂರು ಹಳೆಯ ಕಮಾನು ಸೇತುವೆಯನ್ನು ಪ್ರಯಾಣಿಕರ ಬಸ್ಸು ಹೊರತುಪಡಿಸಿ ಘನ ವಾಹನಗಳ ಸಂಚಾರಕ್ಕೆ ನಿಷೇಧಿಸಲಾಗುವುದು. ಬೆಳಗ್ಗೆ 6ರಿಂದ 11 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 10 ಗಂಟವಯೆರೆಗ ಉಡುಪಿಯಿಂದ ಕೇರಳಕ್ಕೆ ಸಂಚರಿಸುವ ವಾಹನಗಳು ಮುಲ್ಕಿ- ಸುರತ್ಕಲ್- ಎಂಆರ್‌ಪಿಎಲ್- ಬಜ್ಪೆ- ಕೆಪಿಟಿ- ನಂತೂರು ಮಾರ್ಗವಾಗಿ ಸಂಚರಿಸಬೇಕು ಮತ್ತು ಉಡುಪಿ ಸುರತ್ಕಲ್ ಬೆಂಗಳೂರು ಸಂಚರಿಸುವ ವಾಹನಗಳು ಉಡುಪಿ- ಮುಲ್ಕಿ- ಮೂಡಬಿದ್ರೆ- ಬಂಟ್ವಾಳ ಮಾರ್ಗವಾಗಿ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಾಯೋಗಿಕ ಸಂಚಾರ ನಡೆಸಿದ ನಂತರ ಅಗತ್ಯ ಮಾರ್ಪಾಡು ಇದ್ದಲ್ಲಿ ಅದರೊಂದಿಗೆ ಈ ನಿರ್ಬಂಧವನ್ನು ಆ. 25ರಿಂದ ಸೆ. 29ವರೆರಗೆ ವಿಸ್ತರಿಸಲಾಗುವುದು. ಕೂಳೂರು ಸೇತುವೆಯ ದುರಸ್ತಿಯ ಅಗತ್ಯ ಕಾರ್ಯಗಳನ್ನು ಸೆ. 25ರೊಳಗೆ ಕಾರ್ಯಗತಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶಿಸಲಾಗಿದೆ. ಕೂಳೂರು ಸೇತುವೆಯ ಸಾಮರ್ಥ್ಯ ಹಾಗೂ ಸ್ಥಿರತೆ ಬಗ್ಗೆ ಆ.20ರ ಒಳಗೆ ವಿವರವಾದ ವರದಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶಿಸಲಾಗಿದೆ. ಇದಲ್ಲದೆ ಹೊಸ ಸೇತುವೆಯ ಕಾಮಗಾರಿಯನ್ನು ತ್ವರಿತಗೊಳಿಸಿ ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳಿಸಲು ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.