ಬೆಳಗಾವಿ: ಸ್ಟೀಲ್ ವ್ಯಾಪಾರಿಯೊಬ್ಬರ ಅಪಹರಣ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಮತ್ತು ಕಟಕೋಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 8 ಮಂದಿಯ ಖತರ್ನಾಕ್ ತಂಡವನ್ನು ಬಂಧಿಸಿದ್ದಾರೆ.
ವಿಜಯ್ ಲಮಾಣಿ, ಫಿರ್ದೋಜ್ ನಜೀರ್ ಉಸ್ತಾದ್, ಮುಕ್ತಾರ್ ಸಾದಿಕ್ ಶೈಖ್, ಝಮೀರ್ ಹಬೀಬ್ ರೆಹಮಾನಿ ಮುನ್ಸಿ, ಖಾದರ್ ಲತೀಫ್ ಸಾಬ್, ಮೊಹಮ್ಮದ್ ಕೈಫ್, ಮೊಹಮ್ಮದ್ ಹುಸೇನ್ ಮತ್ತು ಖಾಸಿಂ ಸಾಬ್ ಬಂಧಿತ ಆರೋಪಿಗಲಾಗಿದ್ದು ಇವರಿಂದ 188 ಗ್ರಾಂ ಚಿನ್ನ, 4 ಕಾರು, 2 ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಫೆ 23 ರಂದು ರಾಮದುರ್ಗದ ಸ್ಟೀಲ್ ಅಂಗಡಿ ಮಾಲೀಕ ಮುಕೇಶ್ ಕುಮಾರ್ ಅವರನ್ನು ಅಪಹರಿಸಿ, ದೈಹಿಕ ಶಿಕ್ಷೆ ನೀಡಿ 1.05 ಲಕ್ಷ ನಗದು, ಚಿನ್ನಾಭರಣ ಮತ್ತು ಮೊಬೈಲ್ ಕಸಿದುಕೊಂಡಿದ್ದರು. ಇದಕ್ಕೂ ಮೊದಲು ಇದೇ ತಂಡ ಶಂಕರ ರಾಜಪೂತ ಎಂಬವರ ಮನೆಗೆ ನುಗ್ಗಿ, ಮನೆ ಮಂದಿಯನ್ನು ಥಳಿಸಿ 23.69 ಲಕ್ಷ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.