ಮಂಗಳೂರು: ಪ್ರಧಾನಮಂತ್ರಿ ಕಚೇರಿಯ ಅಧಿಕಾರಯ ಸೋಗು ಹಾಕಿಕೊಂಡು ಜಮ್ಮು ಮತ್ತು ಕಾಶ್ಮೀರ ಆಡಳಿತ ಮತ್ತು ಭದ್ರತಾ ವ್ಯವಸ್ಥೆಯನ್ನು ವಂಚಿಸಿದ ಕಿರಣ್ ಭಾಯ್ ಪಟೇಲ್ ತಂಡದಲ್ಲಿ ತಮ್ಮ ಪುತ್ರ ಭಾಗಿಯಾಗಿದ್ದ ವಿಚಾರ ಭಾರೀ ವಿವಾದ ಸೃಷ್ಟಿಸಿದ್ದು ಗುಜರಾತ್ ಮುಖ್ಯಮಂತ್ರಿ ಕಚೇರಿಯ ಹಿರಿಯ ಅಧಿಕಾರಿ ಹಿತೇಶ್ ಪಾಂಡ್ಯ ರಾಜೀನಾಮೆ ನೀಡಿದ್ದಾರೆ.
ಪಾಂಡ್ಯ ಅವರ ಪುತ್ರ ಅಮಿತ್ ಹಿತೇಶ್ ಪಾಂಡ್ಯ ಈ ತಿಂಗಳ ಆರಂಭದಲ್ಲಿ ಬಂಧನದ ನಂತರ ಸುದ್ದಿಯಾಗಿದ್ದ ಕಿರಣ್ ಭಾಯ್ ಪಟೇಲ್ ನೇತೃತ್ವದ ‘ಪ್ರಧಾನಿ ಕಚೇರಿ’ಯ ನಕಲಿ ‘ಅಧಿಕೃತ ತಂಡ’ದ ಭಾಗವಾಗಿದ್ದ. 2001 ರಿಂದ ಗುಜರಾತ್ ಮುಖ್ಯಮಂತ್ರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ಆಗಿ ಸೇವೆ ಸಲ್ಲಿಸುತ್ತಿರುವ ಪಾಂಡ್ಯ ಅವರು ನಿನ್ನೆ ಸಂಜೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಪ್ರಧಾನ ಮಂತ್ರಿ ಕಚೇರಿಯ ಹಿರಿಯ ಅಧಿಕಾರಿಯ ಪೋಸ್ ನೀಡುತ್ತಾ ನಾಲ್ಕು ತಿಂಗಳ ಕಾಲ ಅಧಿಕೃತ ಪ್ರೋಟೋಕಾಲ್ ಅನುಭವಿಸಿದ್ದ ಕಿರಣ್ ಭಾಯ್ ಪಟೇಲ್ ನನ್ನು ಮಾ.2ರಂದು ಬಂಧಿಸಲಾಗಿತ್ತು. ಪಾಂಡ್ಯ ಅವರ ಪುತ್ರ ಅಮಿತ್ ಹಿತೇಶ್ ಪಾಂಡ್ಯ ಕಿರಣ್ ಭಾಯ್ ಪಟೇಲ್ ನೇತೃತ್ವದ ನಕಲಿ ‘ಅಧಿಕೃತ ತಂಡ’ದ ಭಾಗವಾಗಿದ್ದ. ಅಮಿತ್ ಹಿತೇಶ್ ಪಾಂಡ್ಯ, ಗುಜರಾತ್‌ನ ಜೇ ಸಿ ತಾಪರ್ ಹಾಗೂ ರಾಜಸ್ಥಾನದ ತ್ರಿಲೋಕ್ ಸಿಂಗ್ ಶ್ರೀನಗರದ ಪಂಚತಾರಾ ಹೋಟೆಲ್‌ನಲ್ಲಿ ಪಟೇಲ್ ಅವರೊಂದಿಗೆ ಉಳಿದುಕೊಂಡಿದ್ದರು ಮತ್ತು ಪ್ರಧಾನ ಮಂತ್ರಿ ಕಚೇರಿಯ ಅಧಿಕೃತ ತಂಡದಂತೆ ನಟಿಸಿದ್ದರು.