ಮಂಗಳೂರು: ಕಾಲ್ಪನಿಕ ಸಿನಿಮಾಗಳಲ್ಲಿ ನಡೆಯುತ್ತಿದ್ದ ಘಟನೆ ಈಗ ನಿಜ ಜೀವನದಲ್ಲೂ ನಡೆಯುತ್ತಿದೆ. ನವಜಾತ ಶಿಶುವನ್ನು ಕರುಳ ಬಳ್ಳಿ ಮಾಸುವ ಮೊದಲೇ ಹೆತ್ತ ತಾಯಿ 4.5 ಲಕ್ಷ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಜಾರ್ಖಂಡ್‍ನ ಛತ್ರಾ ಜಿಲ್ಲೆಯಲ್ಲಿ ನಡೆದಿದೆ. ಹಸಿವು, ಬಡತನದಿಂದ ಮಗುವನ್ನು ಮಾರಾಟ ಮಾಡಿದ ಹಲವು ಘಟನೆ ನಮ್ಮ ಮುಂದಿದ್ದು ಈ ತಾಯಿ ಮಾತ್ರ ಹಣಕ್ಕಾಗಿ ತನ್ನ ಕರುಳ ಬಳ್ಳಿಯನ್ನು ಮಾರಾಟ ಮಾಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ನವಜಾತ ಶಿಶುವಿನ ತಾಯಿ ಆಶಾದೇವಿ ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ.
ಛತ್ರ ಜಿಲ್ಲೆಯ ಮಕ್ಕಳ ಕಲ್ಯಾಣ ಇಲಾಖೆಯ ಉಪ ಆಯುಕ್ತ ಅಬು ಇಮ್ರಾನ್ ನೀಡಿದ ಮಾಹಿತಿ ಆಧಾರದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು 24 ಗಂಟೆಗಳಲ್ಲಿ ಬೊಕಾರೊ ಜಿಲ್ಲೆಯಿಂದ ನವಜಾತ ಶಿಶುವನ್ನು ರಕ್ಷಿಸಿದ್ದಾರೆ. ಹಜಾರಿಬಾಗ್ ಜಿಲ್ಲೆಯ ಬಡ್ಕಗಾಂವ್ ಗ್ರಾಮದ ದಂಪತಿಗಳು ನವಜಾತ ಶಿಶುವನ್ನು 4.5 ಲಕ್ಷ ರೂ.ಗೆ ಮಾರಾಟ ಮಾಡಲು ಚಾತ್ರಾ ಮತ್ತು ಬೊಕಾರೊದ ಇಬ್ಬರು ದಲ್ಲಾಳಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ವಿಪರ್ಯಾಸವೆಂದರೆ ಮಗುವಿನ ತಾಯಿಗೆ 1 ಲಕ್ಷ ನೀಡಿದ ದಲ್ಲಾಳಿಗಳು ಉಳಿದ 3.5 ಲಕ್ಷವನ್ನು ಅವರೇ ಹಂಚಿಕೊಂಡಿದ್ದಾರೆ. ಛತ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.