ಮಂಗಳೂರು: ಮಂಗಳೂರಿನ ಎರಡು ನದಿಗಳಲ್ಲಿ ನಡೆಯುತ್ತಿದ್ದ ಮರಳು ಗಣಿಗಾರಿಕೆಗೆ ಹಸಿರು ನ್ಯಾಯಪೀಠ ಬ್ರೇಕ್ ಹಾಕಿದೆ. ಮರಳು ಗಣಿಗಾರಿಕೆಗೆ ಅನುಮತಿ ನೀಡಿದ್ದ ಸರ್ಕಾರಕ್ಕೆ ಛಾಟಿ ಬೀಸಿದ ಪೀಠ ಮರಳು ಗಣಿಗಾರಿಕೆಗೆ ಜಿಲ್ಲಾಧಿಕಾರಿ ನೀಡಿದ್ದ ಅನುಮತಿಯನ್ನು ರದ್ದುಪಡಿಸಿ, ನೀರಾವರಿ ಇಲಾಖೆಗೆ 50 ಕೋಟಿ ರೂಪಾಯಿ ದಂಡ ವಿಧಿಸಿದೆ.
ಕಳೆದ ಕೆಲ ತಿಂಗಳ ಹಿಂದೆ ಮಂಗಳೂರು ಜಿಲ್ಲೆಯ ನೇತ್ರಾವತಿ ಹಾಗೂ ಫಾಲ್ಗುಣಿ ನದಿಗಳಲ್ಲಿ ಮರಳು ಗಣಿಗಾರಿಕೆಗೆ ದ.ಕ ಜಿಲ್ಲಾಧಿಕಾರಿಗಳು ಅನುಮತಿಯನ್ನು ನೀಡಿದ್ದರು. ಇದನ್ನು ಪ್ರಶ್ನಿಸಿ ವಿಜಯಪುರ ಜಿಲ್ಲೆಯ ಇಂಡಿಯ ಮಾಜಿ ಶಾಸಕರಾದ ಸೌರಭೌಮ ಬಗಲಿ ಹಸಿರು ಪೀಠಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಕೇವಲ ಅನುಮತಿಯನ್ನು ನೀಡಿದ್ದಕ್ಕೆ ಪ್ರಶ್ನಿಸುವ ಅವಶ್ಯಕತೆ ಇರಲಿಲ್ಲ. ಆದ್ರೆ ಇಲ್ಲಿ ಡ್ಯಾಂಗಳ ಪಕ್ಕದಲ್ಲೆ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ. ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಶಂಭೂರು ಡ್ಯಾಮ್ ಹಾಗೂ ಫಾಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಿಲಾಗಿರುವ ಅಧ್ಯಪಾಡಿ ಡ್ಯಾಮ್ ಗಳ ಸುತ್ತ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ. ಇದು ಈ ಭಾಗದ ಡ್ಯಾಂಗಳಿಗೆ ಮರಣ ಶಾಸನ ಬರೆಯುವ ಪ್ರಯತ್ನವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿರುವ ಸೌರಭೌಮ ಬಗಲಿ ಚೆನ್ನೈನ ದಕ್ಷಿಣ ವಿಭಾಗೀಯ ರಾಷ್ಟ್ರೀಯ ಹಸಿರು ಪೀಠಕ್ಕೆ 2022ರ ಡಿಸೆಂಬರ್ 6ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಹಸಿರು ಪೀಠ, ಅರ್ಜಿಯನ್ನು ಕೂಲಂಕುಷವಾಗಿ ಅವಲೋಕಿಸಿ, ವಿಚಾರಣೆ ನಡೆಸಿದ ಹಸಿರು ಪೀಠ ಮಾರ್ಚ್ 23 ರಂದು ರಾಜ್ಯ ನೀರಾವರಿ ಇಲಾಖೆಗೆ 50 ಕೋಟಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಜೊತೆಗೆ ಮಂಗಳೂರು ಜಿಲ್ಲಾಧಿಕಾರಿಗಳು ನೀಡಿದ್ದ ಮರಳು ಗಣಿಗಾರಿಕೆಗೆ ಆದೇಶವನ್ನು ರದ್ದು ಪಡಿಸಿದೆ. ಬೆಂಗಳೂರಿನ SEIAA ಯಿಂದಲು ಅನುಮತಿ ಪಡೆಯದೆ ಕಾನೂನನ್ನು ಗಾಳಿಗೆ ತೂರಿ ಮರಳು ಗಣಿಗಾರಿಕೆಗೆ ಅನುಮತಿ ನೀಡಿದವರಿಗೆ ಹಸಿರು ಪೀಠ ಛೀಮಾರಿ ಹಾಕಿದ್ದು ತಕ್ಷಣವೇ ಮರಳು ಗಣಿಗಾರಿಕೆ ನಿಲ್ಲಿಸಲು ಆದೇಶಿಸಿದೆ.