ಇಸ್ರೇಲ್‌ ಪ್ರಧಾನಿ ವಿರುದ್ದ ಭುಗಿಲೆದ್ದ ಅಕ್ರೋಶ- ಪ್ರತಿಭಟನೆ

ಮಂಗಳೂರು: ಇಸ್ರೇಲ್‌ನ ನ್ಯಾಯಾಂಗ ವ್ಯವಸ್ಥೆಯನ್ನು ಮಾರ್ಪಡಿಸುವ ಪ್ರಧಾನಿ ಬೆಂಜಮಿನ್‌ ನೆತನ್ಯಾಹು  ಅವರ ಯೋಜನೆಯನ್ನು ಸ್ಥಗಿತಗೊಳಿಸುವಂತೆ  ಆಗ್ರಹಿಸಿದ ರಕ್ಷಣಾ ಸಚಿವ ಯೋವ್‌ ಗಾಲಂಟ್‌ ಅವರನ್ನು ಹುದ್ದೆಯಿಂದ ಕೈಬಿಟ್ಟ ಬೆನ್ನಲ್ಲೇ ಇಸ್ರೇಲ್‌ನಲ್ಲಿ ಸಾವಿರಾರು ಜನರು ಬೀದಿಗಿಳಿದು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು ಇಸ್ರೇಲಿ ಧ್ವಜಗಳನ್ನು ಕೈಗಳಲ್ಲಿ ಹಿಡಿದುಕೊಂಡು ಪ್ರಧಾನಿಯ ಯೋಜನೆಯ ವಿರುದ್ಧ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ಇಸ್ರೇಲ್‌ ಸರ್ಕಾರ ಮತ್ತು ಅಲ್ಲಿನ ನ್ಯಾಯಾಧೀಶರ ನಡುವಿನ ಜಟಾಪಟಿಯ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವವನ್ನು ಅದುಮಲು ಪ್ರಧಾನಿ ನೆತನ್ಯಾಹು ಯತ್ನಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನೆತನ್ಯಾಹು ತಾನು ಜೈಲಿಗೆ ಹೋಗುವುದನ್ನು ತಪ್ಪಿಸಲು ನ್ಯಾಯಾಧೀಶರ ಮೇಲೆ ಒತ್ತಡ ಹೇರಲು ಕೊನೆಯ ಯತ್ನ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಪ್ರತಿಭಟನೆಗಳು ವ್ಯಾಪಕವಾಗುತ್ತಿರುವ ನಡುವೆ ಅಲ್ಲಿನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿದೆ. ವಿಮಾನ ನಿಲ್ದಾಣ ಉದ್ಯೋಗಿಗಳ ಯೂನಿಯನ್‌ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದೆ.

LEAVE A REPLY

Please enter your comment!
Please enter your name here